ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ೪ ಎಕರೆ ಕೆರೆ ಒತ್ತುವರಿ ತೆರವುಗೊಳಿಸಿದರು

ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ೪ ಎಕರೆ ಕೆರೆ ಒತ್ತುವರಿ ತೆರವುಗೊಳಿಸಿದರು.

ದೇವಶೆಟ್ಟಿಹಳ್ಳಿ ಗ್ರಾಮದ ಸರ್ವೇ ನಂ.92ರಲ್ಲಿ ಒಟ್ಟು 29 ಎಕರೆ 38ಗುಂಟೆ ಕೆರೆ ಜಾಗವಿದ್ದು, ಈ ಪೈಕಿ 4 ಎಕರೆ ಜಾಗವನ್ನು ಕೃಷ್ಣಪ್ಪ ಒತ್ತುವರಿ ಮಾಡಿಕೊಂಡಿದ್ದರು. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ನಿರ್ದೇಶನದ ಮೇರೆಗೆ ಜಡಿಗೇನಹಳ್ಳಿ ಹೋಬಳಿ ಉಪ ತಹಸೀಲ್ದಾರ್ ಮುರಳಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡರು.

ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದು, ಸರ್ವೇ ನಡೆಸಿ ಒತ್ತುವರಿ ಪ್ರದೇಶವನ್ನು ಗುರುತಿಸಿ ತೆರವು ಕಾರ್ಯಕ್ಕೆ ಮುಂದಾದರು. ಈ ವೇಳೆ ಒತ್ತುವರಿದಾರರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಧರ್ಭದಲ್ಲಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಅಧಿಕಾರಿಗಳ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಸಂತೋಷ್ ಮಾತನಾಡಿ, ಕೆರೆ ಜಾಗದ ಒತ್ತುವರಿ ತೆರವು ಸಂಬಂಧ ಈ ಹಿಂದೆಯೇ ಆದೇಶವಾಗಿದ್ದರೂ ಜಾಗದ ಸ್ವಾಧೀನ ಮುಂದುವರಿದಿತ್ತು. 2021ರಲ್ಲಿ ಒತ್ತುವರಿದಾರ ಕೃಷ್ಣಪ್ಪ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಸಂದರ್ಭದಲ್ಲಿ ಗ್ರಾಮಸ್ಥರು ನ್ಯಾಯಾಲಯದ ಆದೇಶವನ್ನು ಗೌರವಿಸಿ ತೆರವು ಕಾರ್ಯಕ್ಕೆ ಅಡ್ಡಿಪಡಿಸದೆ ಹಿಂದೆ ಸರಿದಿದ್ದರು. ಇದೀಗ ಉಚ್ಚ ನ್ಯಾಯಾಲಯದ ಆದೇಶ ಹಾಗೂ ಕಂದಾಯ ಇಲಾಖೆ ನಿರ್ದೇಶನದಂತೆ ಒತ್ತುವರಿ ತೆರವುಗೊಳಿಸುತ್ತಿದ್ದು, ಸಂಬಂಧಪಟ್ಟವರು ಸಹ ಕಾನೂನು ಪ್ರಕ್ರಿಯೆಗೆ ಸಹಕರಿಸಬೇಕು. ಕೆರೆ ಜಾಗ ನಮ್ಮ ವೈಯಕ್ತಿಕ ಆಸ್ತಿಯಲ್ಲ. ಇದು ಇಡೀ ಗ್ರಾಮಕ್ಕೆ ಸೇರಬೇಕಾದ ಸಾರ್ವಜನಿಕ ಆಸ್ತಿ. ಕೆರೆ ಉಳಿಸುವ ಉದ್ದೇಶದಿಂದಲೇ ನಾವು ಹೋರಾಟ ಮಾಡುತ್ತಿದ್ದೇವೆ. ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದ ಕೆರೆ ಪ್ರದೇಶದಲ್ಲಿ ನೀರು ಸಂಗ್ರಹವಾಗಿದ್ದು, ಇದರಿಂದ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಹಾಗೂ ಬೋರ್‌ವೆಲ್‌ಗಳಿಗೆ ಅನುಕೂಲವಾಗಲಿದೆ. ಕೆರೆ ನೀರು ಸಂಗ್ರಹದಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಕೆರೆ ಜಾಗವನ್ನು ಸಂರಕ್ಷಿಸುವುದು ಅಗತ್ಯ ಎಂದರು.

2021ರಿಂದಲೂ ಕೆರೆ ಜಾಗ ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ಇದೀಗ ಅಧಿಕಾರಿಗಳು ಕಾನೂನುಬದ್ಧವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಸಂತಸ ತಂದಿದೆ. ಗ್ರಾಮದ ಯುವಕರು ಒಗ್ಗಟ್ಟಿನಿಂದ ಕಾರ್ಯಕ್ಕೆ ಬೆಂಬಲ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೆರೆ ಜಾಗ ಮುಂದಿನ ಹಲವು ತಲೆಮಾರುಗಳಿಗೂ ಉಳಿಯಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ. ಕೆರೆ ಜಾಗದಲ್ಲಿ ಮತ್ತೆ ಒತ್ತುವರಿ ನಡೆಯದಂತೆ ಶಾಶ್ವತವಾಗಿ ಗಡಿ ಗುರುತು ಮಾಡಿಸಿ, ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ಸಂತೋಷ್ ಕಂದಾಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಫೋಟೋ: 4 ಹೆಚ್‌ಎಸ್‌ಕೆ 6 ಮತ್ತು 7

ಹೊಸಕೋಟೆ ತಾಲೂಕಿನ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹೈಕೋರ್ಟ್‌ ಆದೇಶದಂತೆ 4 ಎಕರೆ ಕೆರೆ ಒತ್ತುವರಿ ಜಾಗವನ್ನು ತೆರವು ಗೊಳಿಸಿದರು.