ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಹನೂರು ಹಾಗೂ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಹುಲುಸುಗುಡ್ಡೆ ಬಳಿ ಪ್ರಜಾಸೌಧ ನಿರ್ಮಾಣ ಮಾಡುವ ಸಮೀಪದಲ್ಲಿಯೇ 30 ಕೋಟಿ ಬೆಲೆ ಬಾಳುವ 14 ಎಕರೆ ಸರ್ಕಾರಿ ಆಸ್ತಿ ರಕ್ಷಣೆಯನ್ನು ನಿರಂತರ ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಬೆಳ್ಳಂಬೆಳಗ್ಗೆ ಜೆಸಿಬಿಗಳ ಗರ್ಜನೆ ನಡೆಸಿ ಕಾರ್ಯಾಚರಣೆ ಮೂಲಕ ಒತ್ತುವರಿ ತೆರವುಗೊಳಿಸಲಾಯಿುತು.ಹನೂರು ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣದ ಸ್ಥಳದ ಸಮೀಪದಲ್ಲಿರುವ ಸರ್ವೆ ನಂ. 355 /1ರಲ್ಲಿ 5.50 ಎಕರೆ 356/ಎ 5.54 ಎಕರೆ 356/ಸಿ 2.58 ಎಕರೆ ಒಟ್ಟು 14 ಎಕರೆ ಸರ್ಕಾರಿ ಭೂಮಿ ಒತ್ತುವರಿ 30 ಕೋಟಿ ಬೆಲೆಯ ಜಮೀನನ್ನು ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಖಾತೆ ಮಾಡಿಕೊಂಡು ಅದರಲ್ಲಿ ಮೇಕೆ ಶೆಡ್ ವಾಸದ ಮನೆ ಮತ್ತು ಒಂದು ಗುಡಿಸಲನ್ನು ಹಾಕಲಾಗಿತ್ತು. ಈ ಅಕ್ರಮದ ಬಗ್ಗೆ ತಾಲೂಕಿನ ಛಲವಾದಿ ಮಹಾಸಭಾ ಘಟಕ ಹನೂರು ತಾಲೂಕು ವತಿಯಿಂದ ಮಾ.12 ರಂದು ಪಟ್ಟಣದಲ್ಲಿ ನಡೆದ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು.
ಕಂದಾಯ ಇಲಾಖೆ ಅಧಿಕಾರಿಗಳು 2024 ಏ.4 ರಂದು ಮಂಗಲ ವಿಶ್ವೇಶ್ವರ ಪ್ರಸಾದ್‌ಗೆ ನೋಟಿಸ್ ಜಾರಿಗೊಳಿಸಿದ್ದರು. ನಂತರ ಈ ಬಗ್ಗೆ ಮೇ 9ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಸಾರಗೊಂಡು ಸರ್ಕಾರಿ ಜಾಗದಲ್ಲಿ ಮೇಕೆ ಶೆಡ್ ನೋಟಿಸ್ ಜಾರಿ ಗೊಳಿಸಿರುವ ಬಗ್ಗೆ ವರದಿ ಪ್ರಕಟಗೊಂಡಿತ್ತು. ನಂತರ ಎರಡು ತಿಂಗಳಾದರೂ ತೆರವುಗೊಳಿಸದಿರುವ ಬಗ್ಗೆ ಜೂ.12ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಸಾರ ನೋಡಿ ನೋಟಿಸ್ ನೀಡಿದರು. ಸರ್ಕಾರಿ ಜಾಗ ಒತ್ತುವರಿ ತೆರವಿಲ್ಲ ಎಂಬ ವರದಿಗೆ ಎಚ್ಚೆತ್ತ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತಾಲೂಕು ಆಡಳಿತದ ನಿರ್ಧಾರದಿಂದ ₹30 ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮೂರು ಶೆಡ್ ಗಳನ್ನು ತೆರವುಗೊಳಿಸಲು ಹಲವು ಬಾರಿ ದಿನಾಂಕ ನಿಗದಿಗೊಳಿಸಿರುವ ಸಂದರ್ಭದಲ್ಲಿ ಮಂಗಲ ವಿಶ್ವೇಶ್ವರ ಪ್ರಸಾದ್ ರಾಜಕೀಯ ಪ್ರಭಾವವನ್ನು ಬಳಸಿ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಒತ್ತಡ ತಂದ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ದಿಟ್ಟ ನಿರ್ಧಾರದಿಂದ ₹30 ಕೋಟಿ ಬೆಲೆಬಾಳುವ ಸರ್ಕಾರಿ ಜಮೀನನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.ಏನಿದು ಭೂ ಒತ್ತುವರಿ ಪ್ರಕರಣ:
ಹನೂರು ಪಟ್ಟಣದ ಕಸಬಾ ಹೋಬಳಿಯ ಹುಲ್ಲೇಪುರ ಸರ್ವೆ ನಂಬರ್‌ಗಳಲ್ಲಿ ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಅಕ್ರಮವಾಗಿ ವಿದ್ಯುತ್ ಇಲಾಖೆಯಿಂದಲೂ ಸಹ ಬೇರೆ ಜಮೀನಿನ ಪಹಣಿ ಮತ್ತು ನಕಲಿ ದಾಖಲಾತಿ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದರೂ ಈ ನೆಲೆಯಲ್ಲಿ ಜಿಲ್ಲಾಡಳಿತ ಸರ್ಕಾರಿ ಜಮೀನನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ತಾಲೂಕು ಆಡಳಿತದ ಜೊತೆ ಸಭೆ ನಡೆಸಿ ಮಂಗಳವಾರ ಬೆಳಗ್ಗೆ ಎರಡು ಜೆಸಿಬಿಗಳ ಯಂತ್ರಗಳ ಮೂಲಕ ಅಕ್ರಮ ಶೆಡ್‌ಗಳ ತೆರವು ಕಾರ್ಯವನ್ನು ಪಟ್ಟಣದ ತಾಲೂಕು ಆಡಳಿತದ ದಂಡಾಧಿಕಾರಿ ಗುರುಪ್ರಸಾದ್ ನೇತ್ರತ್ವದಲ್ಲಿ 75ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿ ನೌಕರರ ಸಮ್ಮುಖದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭೂ ಒತ್ತುವರಿ ಜಮೀನನ್ನು ತೆರವುಗೊಳಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಅಕ್ರಮ ಕಟ್ಟಡಗಳ ನೆಲಸಮ:
ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಜಮೀನಿನಲ್ಲಿ ಮಂಗಲ ವಿಶ್ವೇಶ್ವರ ಪ್ರಸಾದ್ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮೇಕೆ ಶೆಡ್ ಹಾಗೂ ಹೊಸದ ಮನೆ ತೆರವುಗೊಳಿಸುವಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮತ್ತು ಚೆಸ್ಕಾಂ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕರಿ ಸಿಬ್ಬಂದಿ ಉಪಸ್ಥಿತರಿದ್ದರು.ಟೆಲಿಫೋನ್ ಕಂಬಗಳ ದಾಸ್ತಾನು:
ಅಧಿಕಾರಿಗಳು ಸರ್ಕಾರಿ ಜಮೀನನ್ನು ತೆರವುಗೊಳಿಸಿದ ಶೆಡ್ ಗಳಲ್ಲಿ20ಕ್ಕೂ ಹೆಚ್ಚು ಟೆಲಿಫೋನ್ ಕಂಬಗಳನ್ನು ಸಹ ತಾಲೂಕಿನ ವಿವಿಧಡೆಯಿಂದ ಇದ್ದಂತ ಕಂಬಗಳನ್ನು ಅಕ್ರಮವಾಗಿ ಶೇಖರಣೆ ಮಾಡಲಾಗಿತ್ತು. ಜೊತೆಗೆ ನಕಲಿ ದಾಖಲೆಗಳನ್ನು ನೀಡಿ ಕೃಷಿ ಇಲಾಖೆ ವತಿಯಿಂದ ಪರಿಕರಗಳನ್ನು ಸಹ ದಾಸ್ತಾನು ಮಾಡಿರುವುದು ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳಿಗೆ ಕಂಡು ಬಂತು.ನಾಮಫಲಕ ಅಳವಡಿಕೆ:
ತಾಲೂಕು ದಂಡಾಧಿಕಾರಿಗಳು ದಿಟ್ಟ ಕ್ರಮದಿಂದಾಗಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಶೆಡ್ ಗಳನ್ನು ತೆರವುಗೊಳಿಸಿ, ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಸ್ವತ್ತು ಈ ಸ್ಥಳದಲ್ಲಿ ಯಾವುದೇ ವ್ಯಕ್ತಿಗಳು ಜಮೀನನ್ನು ಪ್ರವೇಶ ಮಾಡದಂತೆ ತಾಲೂಕು ಆಡಳಿತ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಿದ್ದಾರೆ.ಪೊಲೀಸ್ ಬಿಗಿ ಪಹರೆ:
ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಕಬ್ಜಾ ಮಾಡಿದ್ದ ಮಂಗಲ ವಿಶ್ವೇಶ್ವರ ಪ್ರಸಾದ್ ಅಕ್ರಮ ಶೆಡ್ ನಿರ್ಮಾಣ ಮಾಡಿದ್ದ ಸ್ಥಳದಲ್ಲಿ ಜಿಲ್ಲಾಡಳಿತ ಆದೇಶದ ಮೇರೆಗೆ ಕಂದಾಯ ಇಲಾಖೆ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಆನಂದ್ ಕುಮಾರ್ ಪಿಎಸ್ಐ ಮಂಜುನಾಥ ಪ್ರಸಾದ್ ಶಸ್ತ್ರ ಮೀಸಲು ಪಡೆ ವಾಹನ ಸೇರಿದಂತೆ ರಾಜಸ್ವ ನಿರೀಕ್ಷಕರಾದ ಶೇಷಣ್ಣ ಮತ್ತು ಶಿವಕುಮಾರ್, ಮಹದೇವಸ್ವಾಮಿ, ಗ್ರಾಮ ಲೆಕ್ಕಿಗರಾದ ವಿನೋದ್, ಪುನೀತ್, ವಾಸು ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಎರಡು ಜೆಸಿಬಿ ಯಂತ್ರಗಳ ಮೂಲಕ ಅಕ್ರಮ ಶೆಡ್ ಗಳ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ತಾಲೂಕು ವ್ಯಾಪ್ತಿಯಲ್ಲಿ ಬರುವ ಕೋಟ್ಯಂತರ ರು.ಬೆಲೆಬಾಳುವ ಸರ್ಕಾರಿ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಅಕ್ರಮ ಶೆಡ್ ನಿರ್ಮಾಣ ಮಾಡಿರುವ ಬಗ್ಗೆ ಲೋಕಾಯುಕ್ತ, ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ ತೆರವುಗೊಳಿಸುವಂತೆ ದೂರು ಸಲ್ಲಿಸಲಾಗಿತ್ತು. ಅಧಿಕಾರಿಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಜಮೀನನ್ನು ವಶ ಪಡಿಸಿಕೊಂಡಿರುವುದು ಸರ್ಕಾರದ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ.
ಬಸವರಾಜ್, ಅಧ್ಯಕ್ಷ, ಛಲವಾದಿ ಮಹಾಸಭಾ, ಹನೂರು ತಾಲೂಕು ಘಟಕ.