ಸಾರಾಂಶ
-ಶಹಾಪುರದ ಮದ್ರಿಕಿ ಅರಣ್ಯ ಭೂಮಿ ಒತ್ತುವರಿ । 24 ಜನರ ವಿರುದ್ಧ ಪ್ರಕರಣ ದಾಖಲು । ಅರಣ್ಯ, ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ
------ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಮದ್ರಿಕಿ ಗ್ರಾಮದಲ್ಲಿ ಅರಣ್ಯಕ್ಕೆ ಸೇರಿದ್ದ 20 ಕೋಟಿ ರು. ಬೆಲೆ ಬಾಳುವ 50 ಎಕರೆ ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆಯು ವಶಕ್ಕೆ ಪಡೆಯಿತು.ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ನ.26 ರಂದು 5 ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನಂತರದಲ್ಲಿ 18 ಜನರ ಮೇಲೆ ಪ್ರಕರಣ ದಾಖಲಾಗಿ ಒಟ್ಟು 24 ರೈತರ ವಿರುದ್ಧ ಎಫ್.ಐ.ಆರ್. ದಾಖಲಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಭೀಮರಾಯನಗುಡಿ ಠಾಣೆಯ ಪೊಲೀಸ್ ನೆರವಿನಿಂದ ಅರಣ್ಯ ಪ್ರದೇಶ ತೆರವು ಕಾರ್ಯಚಾರಣೆ ನಡೆದಿದೆ ಎಂದು ಜಿಲ್ಲಾ ಸಹಾಯಕ ಸಂರಕ್ಷಣಾ ಅರಣ್ಯ ಅಧಿಕಾರಿ ಸುನೀಲ್ ಕುಮಾರ ಮಾಹಿತಿ ನೀಡಿದರು.
- ಕೋಟಿ ಕೋಟಿ ರು.ಗಳ ಬೆಲೆ:ಮದ್ರಿಕಿ ಗ್ರಾಮದಲ್ಲಿನ ಜಮೀನಿನ ಬೆಲೆ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಪ್ರಕಾರ ಎಕರೆಗೆ 4 ಲಕ್ಷ ಇದೆ. ಇದರ ಬೆಲೆ 20 ಕೋಟಿಯಾಗುತ್ತದೆ. ಮಾರ್ಕೆಟ್ ರೇಟ್ ಎಕರೆಗೆ 10 ರಿಂದ 14 ಲಕ್ಷ ರು.ಗಳು ಇದೆ. ಸರಾಸರಿ 12 ಲಕ್ಷ ರು.ಗಳು ತೆಗೆದುಕೊಂಡರೆ 50 ಎಕರೆಗೆ 60 ಕೋಟಿ ಬೆಲೆಬಾಳುತ್ತದೆ ಎನ್ನಲಾಗುತ್ತಿದೆ.
ಜಮೀನು ತೆರವು : ಗ್ರಾಮದ ಅರಣ್ಯ ಪ್ರದೇಶ ಸರ್ವೇ ನಂಬರ್ 442ರಲ್ಲಿ 62 ಎಕರೆ ಹಾಗೂ ಸರ್ವೇ ನಂಬರ 330ರಲ್ಲಿ 123.10 ಗುಂಟೆ ಜಮೀನು ಇದೆ. ಗ್ರಾಮದ ಕೆಲ ವ್ಯಕ್ತಿಗಳು ಅಕ್ರಮವಾಗಿ ಅರಣ್ಯ ಪ್ರದೇಶದ 50 ಎಕರೆ ಜಮೀನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದರು. ಸಾಕಷ್ಟು ಬಾರಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರೂ ರೈತರು ಸ್ಪಂದಿಸಲಿಲ್ಲ. ಮೇಲಾಧಿಕಾರಿಗಳ ನಿರ್ದೇಶನದಂತೆ 8 ಜೆಸಿಬಿ ಯಂತ್ರ ಬಳಸಿಕೊಂಡು ಅರಣ್ಯ ಸಿಬ್ಬಂದಿ ಮತ್ತು 40 ಜನ ಭೀಮರಾಯನಗುಡಿ ಪೊಲೀಸ್ ಸಿಬ್ಬಂದಿಯನ್ನು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನಿಯೋಜಿಸಿ ಬಿಗಿ ಬಂದೋಬಸ್ತಿನಲ್ಲಿ ತೆರವುಗೊಳಿಸಿದೆ. ತೆರವುಗೊಳಿಸಿದ ಜಮೀನಿನಲ್ಲಿ ಜೆಸಿಬಿ ಯಂತ್ರದಿಂದ ಜಮೀನು ಸಮತಟ್ಟು ಮಾಡುವುದರ ಜತೆಗೆ ಗುಂಡಿ ಅಗೆದು ಹಾಕಿದ್ದೇವೆ. ಇನ್ನೆರಡು ದಿನದಲ್ಲಿ ಸಸಿ ನೆಡುವ ಕಾರ್ಯ ಸಾಗಲಿದೆ ಎಂದು ಅರಣ್ಯ ಅಧಿಕಾರಿ ಒಬ್ಬರು ತಿಳಿಸಿದರು.ಒತ್ತುವರಿಗೆ ಅಧಿಕಾರಿಗಳೇ ಸಾಥ್ :
ಕೆಲ ಕಂದಾಯ, ಅರಣ್ಯ ಅಧಿಕಾರಿಗಳು ರೈತರಿಗೆ ಪ್ರಚೋದನೆ ನೀಡಿ ಅವರಿಂದ ಒಂದಿಷ್ಟು ಹಣ ಪಡೆದುಕೊಂಡು ಅರಣ್ಯ ಭೂಮಿ ಒತ್ತುವರಿಗೆ ಸಹಕರಿಸಿದ್ದಾರೆ ಎನ್ನುವ ಆರೋಪಗಳು ಗ್ರಾಮದಲ್ಲಿ ಕೇಳಿ ಬಂದಿವೆ. ಕೇವಲ ರೈತರ ಮೇಲೆ ಪ್ರಕರಣ ದಾಖಲಿಸಿದರೆ ಸಾಲದು. ಇದರಿಂದ ಇರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದ್ದಾರೆ.------
....ಕೋಟ್ .....ಅರಣ್ಯ ಪ್ರದೇಶದ 50 ಎಕರೆ ಜಮೀನು ಒತ್ತುವರಿ ತೆರವುಗೊಳಿಸಿದೆ. 24 ಜನರ ವಿರುದ್ಧ ದೂರು ದಾಖಲಿಸಿದೆ. ತೆರವುಗೊಳಿಸಿದ ಜಮೀನಿನಲ್ಲಿ ಸಸಿ ನೆಡಲಾಗುವುದು.
- ಸುನಿಲಕುಮಾರ, ಜಿಲ್ಲಾ ಸಹಾಯಕ ಸಂರಕ್ಷಣಾ ಅಧಿಕಾರಿ, ಯಾದಗಿರಿ.------
4ವೈಡಿಆರ್6: ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಸರ್ವೇ ನಂ. 442ರಲ್ಲಿ ಅಕ್ರಮವಾಗಿ ಒತ್ತುವರಿಯಾದ ಜಮೀನನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯ ಸಹಾಯದಿಂದ ತೆರವುಗೊಳಿಸಲಾಯಿತು.