ಸಾರಾಂಶ
ಬೀದರ್ : ಅರಣ್ಯ ಇಲಾಖೆ ಕಾಯ್ದಿರಿಸಿದ ಭೂಮಿಯಲ್ಲಿ ಅತಿಕ್ರಮಿಸುವುದಕ್ಕೆ ಸಹಕರಿಸಿದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರಿಯೊಂದು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿ, ಬೀದರ್ ನಗರದಿಂದ ಕೇವಲ 10 ಕಿ.ಮೀ. ಅಂತರದಲ್ಲಿರುವ ಕೋಳಾರ (ಕೆ) ಗ್ರಾಮದ ಸರ್ವೇ ನಂ. 120/1,2 &3 ರಲ್ಲಿ ಕಾಯ್ದಿರಿಸಿದ ಅರಣ್ಯ ಇಲಾಖೆಗೆ ಸೇರಿದ ಆಸ್ತಿಯನ್ನು 2007-08ರಲ್ಲಿ ಮೂರು ಜನರು 6 ಎಕರೆ 27 ಗುಂಟೆ ಜಮೀನು ಕಾನೂನು ಬಾಹಿರವಾಗಿ ಕಬ್ಜಾ ಮಾಡಿ ಅದರಲ್ಲಿ ಫಾರ್ಮ ಹೌಸ್ ನಿರ್ಮಿಸಿರುವುದಲ್ಲದೇ ಒಂದು ಕೊಳವೆ ಬಾವಿ ಕೊರೆಯಿಸಿ ಅದರಲ್ಲಿ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ.
ಸದರಿ ಅರಣ್ಯ ಇಲಾಖೆಗೆ ಸೇರಿದ ಕಾಯ್ದಿರಿಸಿದ ಈ ಭೂಮಿಯನ್ನು ಸುಮಾರು ವರ್ಷಗಳಿಂದ ಕಾನೂನು ಬಾಹಿರವಾಗಿ ಅತಿಕ್ರಮಿಸಿರುವುದು ಅರಣ್ಯ ರಕ್ಷಕರ ಗಮನಕ್ಕೆ ಬಂದಿರುವುದಿಲ್ಲವೇ ಎಂಬ ಪ್ರಶ್ನೆ ನಮ್ಮ ಕಾಡುತ್ತಿದೆ. ಕಂದಾಯ ಇಲಾಖೆ/ತಹಸೀಲ್ದಾರರಿಗೆ ಯಾವ ಸ.ನಂ. ಅಲ್ಲಿ ಅರಣ್ಯ ಭೂಮಿ ಇದೆ ಎಂಬುದನ್ನು ಚೆನ್ನಾಗಿ ಗೊತ್ತಿದ್ದರೂ ಕೂಡ ಅರಣ್ಯ ಇಲಾಖೆಗೆ ಸೇರಿದ ಕಾಯ್ದಿರಿಸಿದ ಭೂಮಿಯಲ್ಲಿ 06 ಎಕರೆ 27 ಗುಂಟೆ ಜಮೀನು ಕಾನೂನು ಬಾಹಿರವಾಗಿ ಅತಿಕ್ರಮಿಸಿಕೊಂಡಿದ್ದರೂ ಕೂಡ ಅತಿಕ್ರಮಣಕಾರರ ಹೆಸರಿಗೆ ಪಹಣಿ ಪತ್ರಿಕೆ ಮಡಿಕೊಟ್ಟಿರುವುದು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಭ್ರಷ್ಟ ಅಧಿಕಾರಿಗಳ ಸಹಕಾರ ಇಲ್ಲದೇ ಸಾಧ್ಯವಿಲ್ಲದಾಗಿದೆ.
ಸುಮಾರು ವರ್ಷಗಳಿಂದ ಅರಣ್ಯ ಇಲಾಖೆ ಕಾಯ್ದಿರಿಸಿದ ಭೂಮಿಯಲ್ಲಿ 06 ಎಕರೆ 27 ಗುಂಟೆ ಜಮೀನು ಕಾನೂನು ಬಾಹಿರವಾಗಿ ಕಬ್ಜಾಗೆ ಅನುವು ಮಾಡಿಕೊಟ್ಟಿರುವ ಅರಣ್ಯ ಇಲಾಖೆ ಹಾಗೂ ಸದರಿ ಜಮೀನಿನ ಪಹಣಿ ಪತ್ರಿಕೆ ತಯಾರಿಸುವಲ್ಲಿ ಸಹಕರಿಸಿದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಅಂಬೇಡ್ಕರ್ ಯುವ ಸೇನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ರಾಜಕುಮಾರ ಗೂನಳ್ಳಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಕರ್ನಾಟಕ ಸ್ವಾಭಿಮಾನಿ ಭೋವಿ ವಡ್ಡರ್ ರಾಜ್ಯಾಧ್ಯಕ್ಷರಾದ ಸಂತೋಷ ಏಣಕೂರೆ ಇದ್ದರು.