ಗ್ರಾಪಂ ಸದಸ್ಯರಿಂದಲೇ ಸರ್ಕಾರಿ ಜಾಗ ಅತಿಕ್ರಮಣ?

| Published : Sep 20 2024, 01:36 AM IST

ಗ್ರಾಪಂ ಸದಸ್ಯರಿಂದಲೇ ಸರ್ಕಾರಿ ಜಾಗ ಅತಿಕ್ರಮಣ?
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ತಾಲೂಕು ಕೋರ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ಮತ್ತು ಚರಂಡಿಯನ್ನೇ ಒತ್ತುವರಿ ಮಾಡಿ ಕೋರ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರೇ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಕನ್ನಡಪ್ರಭವಾರ್ತೆ ತುಮಕೂರು

ತುಮಕೂರು ತಾಲೂಕು ಕೋರ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ಮತ್ತು ಚರಂಡಿಯನ್ನೇ ಒತ್ತುವರಿ ಮಾಡಿ ಕೋರ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರೇ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರಕ್ಕೆ ಒಳಪಡುವ ಕೋರ ಗ್ರಾಮದಲ್ಲಿ ಕೆಲ ಸದಸ್ಯರೇ ಇಂತಹ ಅಕ್ರಮ ಪ್ರಯತ್ನ ನಡೆದಿದ್ದು, ಇದು ಇಡೀ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯ ಇನ್ನಿತರೇ ಸದಸ್ಯರು ಗುರುವಾರ ಒಟ್ಟಾಗಿ ನಿಂತು ಅಕ್ರಮವಾಗಿ ನಿವೇಶನ ಹಂಚಿಕೆಗೆ ಪ್ರಯತ್ನಿಸಿದ್ದ ಜಾಗವನ್ನು ಜೆಸಿಬಿ ಮೂಲಕ ತಾವೇ ತೆರವು ಮಾಡಿ ಪುನ: ರಸ್ತೆ ಹಾಗೂ ಚರಂಡಿ ನಿರ್ಮಿಸಿದ ಪ್ರಸಂಗ ನಡೆಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತುಮಕೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಅಧಿಕಾರಿ ಹರ್ಷ ಕುಮಾರ್ ,ಎ.ಡಿ.ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಅವಿನಾಶ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಅಭಿಪ್ರಾಯವನ್ನು ಆಲಿಸಿದರು.

ಬಳಿಕ ಸ್ಥಳದಲ್ಲೇ ಇದ್ದ ಕೋರ ಗ್ರಾ.ಪಂ ಪಿಡಿಓಗೆ ಕೂಡಲೇ ಸಂಬಂಧಿತ ಜಾಗದ ಸಂಪೂರ್ಣ ಮೂಲ ದಾಖಲೆಗಳೊಂದಿಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಿದರು.ಅಲ್ಲದೆ ಮುಂದಿನ ತೀರ್ಮಾನದ ವರೆಗೆ ಸಾರ್ವಜನಿಕ ಸಂಚಾರಕ್ಕೆ ಸ್ಥಳದಲ್ಲಿ ತೊಂದರೆ ಆಗದಂತೆ ಯಥಾಸ್ಥಿತಿ ಕಾದುಕೊಳ್ಳಲು ಸೂಚಿಸಿದ್ದಾರೆ.ಇದಕ್ಕೂ ಮುನ್ನ ವಿವಾದಿತ ಸ್ಥಳಕ್ಕಾಗಮಿಸಿದ ಅಕ್ರಮವಾಗಿ ನಿವೇಶನ ಹಂಚಿಕೆಗೆ ಪ್ರಯತಿನಿಸಿದ್ದಾರೆನ್ನಲಾದ ಸದಸ್ಯರನ್ನು ಸ್ಥಳಕ್ಕೆ ಬಂದಾಗ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸದಸ್ಯರುಗಳ ನಡುವೆ ವಾಗ್ವಾದ ನಡೆಯಿತು.ಸಾರ್ವಜನಿಕ ಸಂಚಾರಕ್ಕೆ ಇರುವ 30 ಅಡಿ ರಸ್ತೆಯನ್ನು ಬಿಟ್ಟು ಉಳಿದ ಜಾಗದಲ್ಲಿ ಬಡವರಿಗೆ ನಿವೇಶನ ನೀಡಲಿ. ಇದಕ್ಕೆ ಯಾರ ತಕರಾರು ಇಲ್ಲ. ಆದರೆ ಕೋರ ಮಾತ್ರವಲ್ಲದೆ, ಹರಿಯಪ್ಪನಹಳ್ಳಿ, ಕಾಟೇನಹಳ್ಳಿ, ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಹೊರವಲಯದ ರಸ್ತೆಯನ್ನೇ ಮುಚ್ಚಿ ನಿವೇಶನ ಹಂಚಿಕೆ ಮಾಡಲು ಹೊರಟಿರುವುದು ಅಕ್ರಮ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇಂತಹ ಅಕ್ರಮ, ಸಾರ್ವಜನಿಕರಿಗೆ ತೊಂದರೆಯಾಗುವ ಪ್ರಯತ್ನ ನಡೆಯುತ್ತಿದ್ದರು ಕಣ್ಣುಮುಚ್ಚಿ ಕೂತಿದ್ದಾರೆ. ಇದನ್ನು ಸಹಿಸುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ಇನ್ನು ಗ್ರಾಮದ ಸರ್ಕಾರಿ ಜಾಗದಲ್ಲಿ ಆಶ್ರಯ ನಿವೇಶನ ಗ್ರಾಮೀಣ ಯೋಜನೆಯಡಿಯಲ್ಲಿ ಗ್ರಾಮಪಂಚಾಯಿತಿಯಿಂದ ನಿವೇಶನ ಹಂಚಿಕೆಯಲ್ಲು ಭಾರೀ ಅಕ್ರಮ ನಡೆದಿದೆ ಎಂಬ ಗ್ರಾಮಸ್ಥರು ಆರೋಪಿಸಿದ್ದಾರೆ. ಬಡವರ ಬದಲು ಲಂಚ ಪಡೆದು ಉಳ್ಳವರಿಗೆ ನಿವೇಶನಗಳನ್ನು ಹಂಚಲಾಗಿದೆ. ಅಲ್ಲದೆ ಈಗಾಗಲೇ ಹಂಚಿಕೆ ಮಾಡಿ ಹಕ್ಕುಪತ್ರ ನೀಡಿರುವ, ಹಂಚಿಕೆಯಾದ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಮೊದಲ ಕಂತಿನ ಅನುದಾನ ಬಂದಿದೆ. ಅಂತಹ ನಿವೇಶನಗಳನ್ನು ಬೇರೆಯವರಿಗೆ ಹಂಚಲಾಗಿದೆ. ಈ ಸಂಬಂಧ ವಿವಿಧ ಫಲಾನುಭವಿಗಳು ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.