ಕಾಡಾನೆಗಳ ದಾಳಿ: ಬೆಳೆ ನಾಶ

| Published : Jan 10 2024, 01:46 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಕೋಡಂಬಹಳ್ಳಿ ಹಾಗೂ ಶ್ಯಾನುಭೋಗನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆಗಳನ್ನು ಧ್ವಂಸ ಮಾಡಿವೆ.

ಚನ್ನಪಟ್ಟಣ: ತಾಲೂಕಿನ ಕೋಡಂಬಹಳ್ಳಿ ಹಾಗೂ ಶ್ಯಾನುಭೋಗನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆಗಳನ್ನು ಧ್ವಂಸ ಮಾಡಿವೆ.

ಕೋಡಂಬಳ್ಳಿ ಗ್ರಾಮದ ರೈತ ರಮೇಶ್ ಅವರ ಹತ್ತು ಮಾವಿನ ಸಸಿ, ಶಿವಲಿಂಗಣ್ಣ ಅವರ ಒಂಬತ್ತು ಮಾವಿನ ಸಸಿ, ಶ್ಯಾನುಭೋಗನಹಳ್ಳಿ ರೈತರಾದ ಬಸವರಾಜು, ಶಿವಮಾದು, ಮಹದೇವ, ವೆಂಕಟೇಶ್, ಪಾಪಣ್ಣ, ದ್ಯಾವಣ್ಣ ಅವರಿಗೆ ಸೇರಿದ ಭತ್ತ, ರಾಗಿ, ತೆಂಗಿನ ಸಸಿಗಳನ್ನು ಆನೆಗಳು ತುಳಿದು ಧ್ವಂಸ ಮಾಡಿದೆ.

ಇದೇ ವೇಳೆ ಜಮೀನಿನಲ್ಲಿದ್ದ ನೀರು ಹರಿಸುವ ಪೈಪುಗಳನ್ನು ತುಳಿದು ಹಾಕಿವೆ. ಆನೆ ದಾಳಿಯಿಂದ ರೈತರ ಲಕ್ಷಾಂತರ ರು. ನಷ್ಟ ಅನುಭವಿಸುವಂತಾಗಿದೆ. ಕಬ್ಬಾಳು ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ ಬರುವ ಆನೆಗಳು ಸಮೀಪದ ಬೆಟ್ಟಗುಡ್ಡ ಪ್ರದೇಶದಲ್ಲಿ ಬೀಡುಬಿಟ್ಟು ರೈತರ ಜಮೀನಿಗೆ ದಾಂಗುಡಿ ಇಡುತ್ತಿವೆ. ಮೊದಲೇ ಮಳೆಯ ಅಭಾವದಿಂದ ರೈತರು ಕಂಗಾಲಾಗಿದ್ದು, ಅಳಿದುಳಿದ ಬೆಳೆಗಳನ್ನು ಕಾಡಾನೆಗಳು ನಾಶಪಡಿಸುತ್ತಿವೆ.

ಕಾಡಾನೆಗಳು ಬಂದಾಗ ಪಟಾಕಿ ಸಿಡಿಸಿ, ತಮಟೆ ಹೊಡೆದು ಅವುಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಇಲ್ಲ. ಕಾಡಾನೆಗಳ ಗ್ರಾಮಗಳತ್ತ ಬಾರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಸಾತನೂರು ವಲಯದ ಅರಣ್ಯಾಧಿಕಾರಿಗಳಾದ ಮುತ್ತುನಾಯಕ್, ಕಾಂತರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಲಭ್ಯವಿರುವ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.ಪೊಟೋ೯ಸಿಪಿಟಿ೪:

ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ನಷ್ಟ ಅನುಭವಿಸಿದ ರೈತ.