ಕೆಆರ್‌ಎಸ್‌ ಹಿನ್ನೀರು ಪ್ರದೇಶ ಒತ್ತುವರಿ: ಆರೋಪ

| Published : Jun 27 2024, 01:08 AM IST

ಕೆಆರ್‌ಎಸ್‌ ಹಿನ್ನೀರು ಪ್ರದೇಶ ಒತ್ತುವರಿ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳ ಮೂಲದ ನಕೇಶ್ ಜಾನ್ ಮ್ಯಾಥ್ಯೂ ಎಂಬುವವರು ಅಣೆಕಟ್ಟೆಯ ಉತ್ತರ ಭಾಗದ ಸರ್ವೇ ನಂ.279ರಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ 2 ರಿಂದ 3 ಎಕರೆ ಜಮೀನು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಹಿನ್ನೀರು ಪ್ರದೇಶದ ಸುಮಾರು 3 ರಿಂದ 4 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿದ್ದಾರೆಂದು ಆಪಾದಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆಯ ಉತ್ತರ ಭಾಗದ ಸಮೀಪ ಹಿನ್ನೀರು ಪ್ರದೇಶವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೇರಳ ಮೂಲದ ನಕೇಶ್ ಜಾನ್ ಮ್ಯಾಥ್ಯೂ ಎಂಬುವವರು ಅಣೆಕಟ್ಟೆಯ ಉತ್ತರ ಭಾಗದ ಸರ್ವೇ ನಂ.279ರಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ 2 ರಿಂದ 3 ಎಕರೆ ಜಮೀನು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಹಿನ್ನೀರು ಪ್ರದೇಶದ ಸುಮಾರು 3 ರಿಂದ 4 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿದ್ದಾರೆಂದು ಆಪಾದಿಸಲಾಗಿದೆ.

ಇದರ ಜೊತೆಗೆ ತಮ್ಮ ಜಮೀನಿಗೆ ಹೊಂದಿಕೊಂಡಂತಿದ್ದ ಕೆಆರ್‌ಎಸ್ ಹಿನ್ನಿರಿನ ಪ್ರದೇಶ ತನಗೆ ಸೇರಿದೆ ಎಂದು ಸುಮಾರು 30 ಅಡಿ ಉದ್ದ 100 ಅಡಿ ಅಗಲದಷ್ಟು ಹಿನ್ನಿರಿನ ಪಾತ್ರವನ್ನು ಅತಿಕ್ರಮಿಸಿಕೊಂಡು ಗುಂಡಿ ತೋಡಿ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಸುತ್ತಿರುವುದಾಗಿ ದೂರಲಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಸಹಾಯದಿಂದ ಅತಿಕ್ರಮಣ ನಡೆಯುತ್ತಿದ್ದು, ಒತ್ತುವರಿ ಜಾಗದಲ್ಲಿ ಜೆಸಿಬಿ ಮೂಲಕ ಟ್ರಂಚ್ ತೆಗೆದು ಫೆನ್ಸ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಒತ್ತುವರಿಯಿಂದ ಅಣೆಕಟ್ಟೆಗೆ ಅಪಾಯದ ಜೊತೆಗೆ ಸಂಗ್ರಹ ಸಾಮರ್ಥ್ಯ ಸಹ ಕುಗ್ಗಲಿದೆ ಹೀಗಿದ್ದರೂ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಕೆಆರ್‌ಎಸ್ ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿಶೋರ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆಆರ್‌ಎಸ್ ಹಿನ್ನೀರಿನಲ್ಲಿ ಯಾವುದೇ ಕಾಮಗಾರಿ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ನಮ್ಮ ಇಲಾಖೆ ತಿಳಿಸದೆ ಕೇವಲ ಏಕಪಕ್ಷಿಯವಾಗಿ ಸರ್ವೇ ನಡೆಸಲಾಗಿದೆ, ಜಂಟಿ ಸರ್ವೇ ನಡೆಸುವವರೆಗೂ ಕಾನೂನು ಮೀರಿ ಕಾಮಗಾರಿ ನಡೆಸಿದರೆ ಅಗತ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಸುಮಾರು 326 ಕಿ.ಮೀ. ವಿಸ್ತೀರ್ಣದ ಅಣೆಕಟ್ಟೆ ಹಿನ್ನಿರಿನ ಪ್ರದೇಶದಲ್ಲಿ ಹಲವಾರು ಕಡೆ ಸಾಮಾನ್ಯರಿಂದ ಹಿಡಿದು ಗಣ್ಯವ್ಯಕ್ತಿಗಳೂ ಸಹ ಹಿನ್ನೀರಿನ ಪ್ರದೇಶ ಒತ್ತವರಿ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಲು ಹೋದ ಅಧಿಕಾರಿಗಳಿಗೆ ರಾಜಕೀಯ ಪ್ರಭಾವ ಬೀರಿ ಕ್ರಮ ಜರುಗಿಸದಂತೆ ನೋಡಿಕೊಳ್ಳುತ್ತಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ ಎಂದು ಆರೋಪಿಸಲಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಸುಮಾರು 8 ರಿಂದ 10 ಕಿ.ಮೀ ನಷ್ಟು ಹಿನ್ನಿರಿನ ಪ್ರದೇಶ ಒತ್ತುವರಿಯಾಗಿದ್ದು, ಇದರಿಂದ ಸುಮಾರು 3 ಟಿ.ಎಂ.ಸಿ ನೀರಿನ ಸಂಗ್ರಹ ಕಡಿಮೆಯಾಗಲಿದೆ.

- ಮಜ್ಜಿಗೆಪುರ ಮಂಜುನಾಥ್, ಸದಸ್ಯರು, ಹುಲಿಕೆರೆ ಪಂಚಾಯ್ತಿ

ಕೇವಲ ಅಣೆಕಟ್ಟೆ ಪುರ್ನಶ್ಚೇತನ ಕಾಮಗಾರಿಗೆ ಒತ್ತುಕೊಟ್ಟಿರುವ ಜಲಸಂನ್ಮೂಲ ಇಲಾಖೆ, ಕೆಆರ್‌ಎಸ್ ಅಣೆಕಟ್ಟೆಯ ಹಿನ್ನಿರಿನ ಪ್ರದೇಶದಲ್ಲಿ ಅಕ್ರಮ ಒತ್ತುವರಿ ತೆರವಿನ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಅಣೆಕಟ್ಟೆ ನೀರು ಪೂರ್ಣ ತುಂಬಿದಾಗ ಜಾಗ ಗುರ್ತಿಸಬೇಕು, ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಹಾಕಲಾಗಿದ್ದ ಬೃಹತ್ ಗುರುತು ಕಲ್ಲುಗಳು ಹಲವೆಡೆ ಇವೆ. ಈಗ ಹೊಸದಾಗಿ ಕಲ್ಲುಗಳನ್ನು ಹಾಕಿ ಒತ್ತುವರಿ ತೆರವು ಮಾಡಿಸಬೇಕು.

- ಮಂಜು, ಸದಸ್ಯರು, ಕೆಆರ್‌ಎಸ್ ಗ್ರಾಪಂ

ಕೆಆರ್‌ಎಸ್‌ ಒಳಹರಿವಿನಲ್ಲಿ ಹೆಚ್ಚಳ

ಕನ್ನಡಪ್ರಭ ವಾರ್ತೆ ಮಂಡ್ಯಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕುಗೊಂಡಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳವಾಗಿದೆ. ಮಂಗಳವಾರ 1000 ಕ್ಯುಸೆಕ್‌ ಇದ್ದ ಕೆಆರ್‌ಎಸ್‌ ಒಳಹರಿವು ಬುಧವಾರ 2241 ಕ್ಯುಸೆಕ್‌ಗೆ ಹೆಚ್ಚಿದೆ. ಜಲಾಶಯದಿಂದ 986 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ 87.90 ಅಡಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ 14.724 ಟಿಎಂಸಿ ನೀರು ಸಂಗ್ರಹವಾಗಿದೆ.