ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿರುವ ೧೭ ಮಂದಿ ಖಾಸಗಿ ವ್ಯಕ್ತಿಗಳಿಗೆ ಮಿಮ್ಸ್ ಜಾಗದ ಒತ್ತುವರಿ ಸಂಬಂಧ ತನಿಖಾ ತಂಡದ ಸಮಿತಿ ಅಧ್ಯಕ್ಷರು ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಬುಧವಾರದಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದ್ದು, ಒತ್ತುವರಿದಾರರ ಪೈಕಿ ೮ ಮಂದಿ ಮಾತ್ರ ಪಡೆದುಕೊಂಡಿದ್ದಾರೆ. ಉಳಿದ ೯ ಮಂದಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿರುವ ೧೭ ಮಂದಿ ಖಾಸಗಿ ವ್ಯಕ್ತಿಗಳಿಗೆ ಮಿಮ್ಸ್ ಜಾಗದ ಒತ್ತುವರಿ ಸಂಬಂಧ ತನಿಖಾ ತಂಡದ ಸಮಿತಿ ಅಧ್ಯಕ್ಷರು ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಬುಧವಾರದಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದ್ದು, ಒತ್ತುವರಿದಾರರ ಪೈಕಿ ೮ ಮಂದಿ ಮಾತ್ರ ಪಡೆದುಕೊಂಡಿದ್ದಾರೆ. ಉಳಿದ ೯ ಮಂದಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಿಮ್ಸ್‌ಗೆ ಸೇರಿದ ಜಾಗದಲ್ಲಿರುವ ಕಟ್ಟಡಗಳು, ಮನೆಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದು ಮುಂದಿನ ೧೫ ದಿನಗಳೊಳಗೆ ಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಮಿತಿಯ ಎದುರು ಹಾಜರುಪಡಿಸುವಂತೆ ಸೂಚಿಸಲಾಗಿದೆ. ನೋಟಿಸ್‌ ಅನ್ನು ಪಡೆಯದೆ ತಿರಸ್ಕರಿಸಿದವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ರವಾನಿಸಲಾಗುವುದು. ಅದನ್ನೂ ಪಡೆಯದಿದ್ದರೆ ಮನೆಗಳು ಮತ್ತು ಕಟ್ಟಡಗಳಿಗೆ ನೋಟಿಸ್ ಪ್ರತಿಯನ್ನು ಅಂಟಿಸುವುದಕ್ಕೆ ತೀರ್ಮಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ಭೂ-ಸ್ವಾಧೀನವಾದ ನಂತರ ಭೂ-ಸ್ವಾಧೀನವಾಗಿರುವ ಜಮೀನು ಮತ್ತು ಒತ್ತುವರಿ ಬಗ್ಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ನಕ್ಷೆಯನ್ನು ಪಡೆದುಕೊಳ್ಳಲಾಗಿದೆ. ಈ ನಕ್ಷೆಯನುಸಾರ ಅನಧಿಕೃತ ಖಾತೆ ನೀಡಿರುವ ಬಗ್ಗೆ ಸ್ವತ್ತಿನ ಸಂಖ್ಯೆವಾರು ನಗರಸಭೆಯಿಂದ ಮಾಹಿತಿ ಪಡೆಯಲಾಗಿದೆ. ತಾಲೂಕು ಭೂ-ಮಾಪಕರ ನಕ್ಷೆಯಂತೆ ಆಸ್ಪತ್ರೆ ನಿರ್ಮಾಣಕ್ಕೆ ಸ್ವಾಧೀನವಾಗಿರುವ ಸರ್ವೇ ನಂಬರ್‌ಗಳಲ್ಲಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮನೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಜಿಲ್ಲಾ ಆಸ್ಪತ್ರೆಗೆ ಸೇರಿದ ಒಟ್ಟಾರೆ ೩೯.೩೩ ಎಕರೆ ಜಮೀನು ಸ್ವಾಧೀನಾಗಿರುವ ಸರ್ವೇ ನಂಬರ್‌ಗಳಲ್ಲಿ ೧೪.೨೪ ಎಕರೆ ಜಮೀನು ಒತ್ತುವರಿಯಾಗಿರುವುದು ಕಂಡುಬಂದಿದೆ. ತನಿಖಾ ತಂಡದ ಎಲ್ಲಾ ಸದಸ್ಯರು ಖುದ್ದು ದಾಖಲಾತಿಗಳನ್ನು ಪರಿಶೀಲಿಸಿ ತನಿಖೆ ನಡೆಸಿ ಒತ್ತುವರಿಯಾಗಿರುವ ಜಾಗವನ್ನು ಗುರುತಿಸಲಾಗಿದೆ ಎಂದು ಗೊತ್ತಾಗಿದೆ.

ಒತ್ತುವರಿಯಾಗಿರುವ ಕಟ್ಟಡಗಳಿಗೆ ಮತ್ತು ಮಾಲೀಕತ್ವದ ಬಗ್ಗೆ ನಗರಸಭೆಯಿಂದ ಈಗಾಗಲೇ ಖಾತೆ ನೀಡಿದ್ದರೂ, ಮಾಲೀಕತ್ವವನ್ನು ಸಾಬೀತುಪಡಿಸಲು ಯಾವ ದಾಖಲೆಗಳ ಆಧಾರದ ಮೇಲೆ ಖಾತೆ ಮಾಡಿದ್ದಾರೆ ಎಂಬುದಕ್ಕೆ ಪೂರಕ ದಾಖಲೆಗಳು ಇರುವುದಿಲ್ಲ. ಜಮೀನನ್ನು ಸಕ್ಷಮ ಪ್ರಾಧಿಕಾರ ಸರ್ಕಾರದ ವತಿಯಿಂದ ಮಂಜೂರಾಗದೆ ಯಾವುದೇ ಖಾಸಗಿ ಸಂಸ್ಥೆ ವ್ಯಾಪ್ತಿಗೆ ಖಾತೆ ನೀಡುವುದಕ್ಕೆ ಅವಕಾಶವಿರುವುದಿಲ್ಲ. ದಾಖಲೆಗಳ ಆಧಾರದ ಮೇಲೆ ಖಾಸಗಿ ವ್ಯಕ್ತಿಗೆ ಖಾತೆ ನೀಡಿದ್ದರೆ ಮಾಲೀಕತ್ವಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಒದಗಿಸಬೇಕಿರುತ್ತದೆ. ಯಾವ ಆಧಾರದ ಮೇಲೆ ಖಾತೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪರಿಶೀಲಿಸಿ ಸೂಕ್ತ ದಾಖಲೆಗಳನ್ನು ಅತಿಕ್ರಮ ಮಾಡಿರುವ ಕಟ್ಟಡ ಮಾಲೀಕರಿಂದ ದಾಖಲೆಗಳ ಜೊತೆ ತಾಳೆ ಮಾಡಬೇಕು. ಅಕ್ರಮ ಖಾತೆಗಳಾಗಿದ್ದರೆ ಅವುಗಳನ್ನು ರದ್ದುಪಡಿಸಲು ಸಮಿತಿ ಶಿಫಾರಸ್ಸು ಮಾಡಲಿದೆ.ಆಸ್ಪತ್ರೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿರುವ ೧೭ ಮಂದಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ೮ ಮಂದಿ ಮಾತ್ರ ನೋಟಿಸ್ ಪಡೆದುಕೊಂಡಿದ್ದಾರೆ. ಉಳಿದವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಲಾಗುವುದು. ೧೫ ದಿನಗಳೊಳಗೆ ಒತ್ತುವರಿದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ಅವು ಅಕ್ರಮ ಖಾತೆಗಳಾಗಿದ್ದರೆ ರದ್ದುಪಡಿಸುವಂತೆ ನಗರಸಭೆಗೆ ಶಿಫಾರಸು ಮಾಡಲಾಗುವುದು.

- ಕೃಷ್ಣಕುಮಾರ್, ಅಧ್ಯಕ್ಷರು, ಮಿಮ್ಸ್ ಜಾಗ ಒತ್ತುವರಿ ತನಿಖಾ ತಂಡ ಸಮಿತಿ