ಶಾಲೆ ಜಾಗ ಒತ್ತುವರಿ; ಕ್ರಮ ಕೈಗೊಳ್ಳದಿದ್ರೆ ಗೋ ಬ್ಯಾಕ್ ಚಳವಳಿ

| Published : Feb 05 2024, 01:49 AM IST

ಶಾಲೆ ಜಾಗ ಒತ್ತುವರಿ; ಕ್ರಮ ಕೈಗೊಳ್ಳದಿದ್ರೆ ಗೋ ಬ್ಯಾಕ್ ಚಳವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆ ಜಾಗ ರಕ್ಷಣೆ ಮಾಡಬೇಕಿರುವ ಶಾಸಕ ಡಾ.ಶಿವರಾಜ ಪಾಟೀಲ್‌ರು ಶಾಲೆಯನ್ನು ಬೇರೆಡೆ ವರ್ಗಾಯಿಸಬೇಕು ಎಂದು ಪತ್ರ ಬರೆದಿದ್ದು ಖಂಡನೀಯ. ಶಾಲೆಗೆ ಮೀಸಲಾದ ಜಾಗದಲ್ಲಿಯೇ ಶಾಲೆ ನಿರ್ಮಾಣ ಮಾಡಬೇಕು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಕನ್ನಡಪ್ರಭವಾರ್ತೆ ರಾಯಚೂರು

ಇಲ್ಲಿನ 28ನೇ ವಾರ್ಡ್ ವ್ಯಾಪ್ತಿಯ ಸಂತೋಷನಗರ ಬಡಾವಣೆ ಸರ್ಕಾರಿ ಪ್ರೌಢಶಾಲೆ ಜಾಗ ಒತ್ತುವರಿ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದನ್ನು ತೆರವುಗೊಳಿಸಲು ಕ್ರಮ ವಹಿಸದೇ ಇದ್ದಲ್ಲಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್‌ರ ವಿರುದ್ಧ ಗೋ ಬ್ಯಾಕ್ ಚಳವಳಿ ಮಾಡಲಾಗುವುದು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಅಶೋಕ ಕುಮಾರ ಸಿ.ಕೆ ಜೈನ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂ. 384/1/ಎ ನಾಗರಿಕ ಸೌಲಭ್ಯ ಕೋಟಾದಡಿ ಅಲ್ಲಮಪ್ರಭು ಕಾಲೋನಿ ಪ್ರೌಢಶಾಲೆಗೆ ನೀಡಿದ ಜಾಗ ಕೆಲವರು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿಕೊಂಡಿದ್ದಾರೆ. ಶಾಲೆ ಜಾಗ ರಕ್ಷಣೆ ಮಾಡಬೇಕಿರುವ ಶಾಸಕ ಡಾ.ಶಿವರಾಜ ಪಾಟೀಲ್‌ರು ಶಾಲೆಯನ್ನು ಬೇರೆಡೆ ವರ್ಗಾಯಿಸಬೇಕು ಎಂದು ಪತ್ರ ಬರೆದಿದ್ದು ಖಂಡನೀಯ. ಶಾಲೆಗೆ ಮೀಸಲಾದ ಜಾಗದಲ್ಲಿಯೇ ಶಾಲೆ ನಿರ್ಮಾಣ ಮಾಡಬೇಕು ಆಗ್ರಹಿಸಿದರು.

ಸಚಿವ ಪಾಟೀಲರ ಮಾತಿಗೆ ಬೆಲೆ ಕೊಡದ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಬಿಇಒ ಚಂದ್ರಶೇಖರ ಭಂಡಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೆಲ್ಲರೂ ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕನ್ನಡ ಶಾಲೆ ಉಳುವಿಗೆ ಹೋರಾಟ ಮಾಡುತ್ತಿದ್ದು ಮಕ್ಕಳಿಗಾಗಿ ಜೈಲಿಗೂ ಹೋಗಲು ಸಿದ್ಧರಾಗಿದ್ದೇವೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಇದ್ದಲ್ಲಿಯೇ ಶಾಲೆ ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಹೋರಾಟಗಾರ ಎಸ್. ನರಸಿಂಹಲು, ಶ್ರೀನಿವಾಸ ಕಲವಲದೊಡ್ಡಿ ಸಾದೀಕ್ ಪಾಶ ಉಪಸ್ಥಿತರಿದ್ದರು.