ಸಾರಾಂಶ
ಮದ್ದೂರು ಪಟ್ಟಣದ ಪುರಸಭೆ ವ್ಯಾಪ್ತಿಯ 10ನೇ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಅಕ್ರಮ ಒತ್ತುವರಿಯನ್ನು ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಸಭೆ ವ್ಯಾಪ್ತಿಯ 10ನೇ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಅಕ್ರಮ ಒತ್ತುವರಿಯನ್ನು ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಯಿತು.ಕಳೆದ ಹಲವು ವರ್ಷಗಳ ಹಿಂದೆ 40ನೇ ವಾರ್ಡ್ ಸೇರಿದಂತೆ ಚನ್ನೇಗೌಡ ಬಡಾವಣೆಯಲ್ಲಿ ಉಂಟಾಗಿದ್ದ ಬೆಂಕಿ ಆಕಸ್ಮಿಕದಲ್ಲಿ ನೂರಾರು ಮನೆಗಳು ಸುಟ್ಟು ಭಸ್ಮ ವಾಗಿದ್ದ ಹಿನ್ನೆಲೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ನಿರ್ಗತಿಕರಿಗೆ ಹಂಚಿಕೆ ಮಾಡಲಾಗಿತ್ತು.
ಆನಂತರ ಮನೆಗಳ ನಿವಾಸಿಗಳು ಅಕ್ರಮವಾಗಿ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಶೌಚಾಲಯ ಮತ್ತು ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಶಾಸಕ ಕೆ.ಎಂ.ಉದಯ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದರು.ಅದರಂತೆ 10ನೇ ವಾರ್ಡ್ ನಲ್ಲಿ ರಸ್ತೆ, ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಒತ್ತುವರಿ ಅಡ್ಡಿಯಾಗಿತ್ತು. ಈ ಬಗ್ಗೆ ಹಲವು ಬಾರಿ ಮನೆಗಳ ನಿವಾಸಿಗಳಿಗೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಸಹ ನಿವಾಸಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರು.
ಈ ಬಗ್ಗೆ ಶನಿವಾರ ಶಾಸಕ ಉದಯ್ ಪುರಸಭೆ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬಿಗಿ ಪೊಲೀಸ್ ಬಂದೋಬಸ್ತ್ ಒತ್ತುವರಿ ತೆರವುಗೊಳಿಸಿದರು. ಪುರಸಭೆ ಅಧ್ಯಕ್ಷ ಕೋಕಿಲ ಅರುಣ್, ಸದಸ್ಯ ಸಿದ್ದರಾಜು, ಕಂದಾಯ ಅಧಿಕಾರಿ ಪುಟ್ಟಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಸಿಬ್ಬಂದಿ ಇದ್ದರು.