ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ತಾಲೂಕಿನ ಹೆಬ್ಬಂಡಿ ಗ್ರಾಮದಲ್ಲಿ ನಕಾಶೆ ಕಂಡಂತೆ ಹಿಂದೂ ರುದ್ರಭೂಮಿಗೆ ಸಂಪರ್ಕ ಹೊಂದಿದ್ದ, ಅತಿಕ್ರಮಿಸಿಕೊಂಡಿದ್ದ ರಸ್ತೆಯನ್ನು ತೆರವುಗೊಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಒಪ್ಪಿಸುವಲ್ಲಿ ತಾಲೂಕು ಆಡಳಿತ ಯಶಸ್ವಿಯಾಗಿದ್ದು, ಈ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಘಟಕ ಹಾಗೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.ಹೆಬ್ಬಂಡಿ ಗ್ರಾಮದ ಸರ್ವೆ ನಂ.೧೨೫*ರಲ್ಲಿ ೧ ಎಕರೆ ೩೮ ಗುಂಟೆ ಜಮೀನು ಹಿಂದೂ ರುದ್ರಭೂಮಿಗೆ ನಿಗದಿಪಡಿಸಿದ್ದು, ಹಲ ವಾರು ವರ್ಷಗಳಿಂದ ಅಂತ್ಯ ಸಂಸ್ಕಾರ ನೆರವೇರಿಸಿಕೊಂಡು ಬರಲಾಗುತ್ತಿದೆ. ರುದ್ರಭೂಮಿಗೆ ನಕಾಶೆ ಕಂಡಂತೆ ರಸ್ತೆ ತೋರಿಸಿದ್ದರೂ ಸಹ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದಾಗಿ ಗ್ರಾಮಸ್ಥರು ಅಂತ್ಯ ಸಂಸ್ಕಾರ ನೆರವೇರಿಸಲು ಹೆಚ್ಚಿನ ದೂರ ಕ್ರಮಿಸಬೇಕಾಗಿತ್ತು. ಈ ವಿಚಾರ ದಲಿತ ಸಂಘರ್ಷ ಸಮಿತಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಸಂಬಂಧ ಕೆಲವು ತಿಂಗಳುಗಳಿಂದ ನಿರಂತರವಾಗಿ ಹೋರಾಟ ನಡೆಸುವ ಮೂಲಕ ಸಂಬಂಧ ಆಡಳಿತಕ್ಕೆ ಮನವಿ ಸಲ್ಲಿಸಿತ್ತು.
ತಾಲೂಕು ಆಡಳಿತ ಈ ಕುರಿತು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ನಕಾಶೆ ಕಂಡಂತೆ ರಸ್ತೆ ಒತ್ತುವರಿಯಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಸಹಯೋಗದೊಂದಿಗೆ ಸರ್ವೆ ಕಾರ್ಯ ಕೈಗೊಂಡು ತೆರವುಗೊಳಿಸಿರುವ ರಸ್ತೆಯನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ವಹಿಸಿಕೊಡಲಾಗಿದೆ.ಈ ಕುರಿತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಘಟಕದ ಪುಟ್ಟರಾಜು, ನಮ್ಮ ಹೋರಾಟಕ್ಕೆ ತಾಲೂಕು ಆಡಳಿತ ಸ್ಪಂದಿಸಿ ನಕಾಶೆ ಕಂಡಂತೆ ರುದ್ರಭೂಮಿಗೆ ಸಂಪರ್ಕ ಹೊಂದಿದ್ದ, ಅತಿಕ್ರಮಿಸಿಕೊಂಡಿದ್ದ ರಸ್ತೆ ತೆರವು ಗೊಳಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಟ್ಟಿರುವುದು ಸಂತೋಷದ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.