ದಾವಣೆಗೆರೆಯಲ್ಲಿ ಡಾ.ಪ್ರಭಾರಿಂದ ಬಿಜೆಪಿ ಯುಗಾಂತ್ಯ: ಕಾಂಗ್ರೆಸ್‌ ಕಾರ್ಯಕರ್ತರ ಉದ್ಘೋಷ

| Published : Jun 08 2024, 12:35 AM IST

ದಾವಣೆಗೆರೆಯಲ್ಲಿ ಡಾ.ಪ್ರಭಾರಿಂದ ಬಿಜೆಪಿ ಯುಗಾಂತ್ಯ: ಕಾಂಗ್ರೆಸ್‌ ಕಾರ್ಯಕರ್ತರ ಉದ್ಘೋಷ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಪಾಲಿಕೆ ಆವರಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಭ್ರಮಾಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಎರಡೂ ದಶಕದ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಜಯ ಸಾಧಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರವನ್ನು ತಂದು ಕೊಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಮಹಾ ನಗರ ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿ ಸಂಭ್ರಮಾಚರಿಸಿದರು.

ನಗರ ಪಾಲಿಕೆ ಆವರಣದಲ್ಲಿ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಹಿರಿಯ ಸದಸ್ಯರಾದ ಮಾಜಿ ಮೇಯರ್ ಅಬ್ದುಲ್ ಲತೀಫ್‌, ಕೆ.ಚಮನ್‌ ಸಾಬ್, ಜಿ.ಎಸ್.ಮಂಜುನಾಥ ಗಡಿಗುಡಾಳ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಇತರರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಕಾಂಗ್ರೆಸ್ ಪಕ್ಷ, ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಜಯಕಾರ ಕೂಗಿದರು.

ಇದೇ ವೇಳೆ ಮಾತನಾಡಿದ ಮುಖಂಡ ಮಂಜುನಾಥ ಗಡಿಗುಡಾಳ, 25 ವರ್ಷದ ಬಳಿಕ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದ್ದು, ಸುಶಿಕ್ಷಿತ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವ ಬದ್ಧತೆ, ಕಾಳಜಿ ಇರುವ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಆಯ್ಕೆ ಮಾಡುವ ಮೂಲಕ ಪ್ರಬುದ್ಧ ಮತದಾರರು ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ಇನ್ನು ಮುಂದೆ ದಾವಣಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಾಗಾಲೋಟದಲ್ಲಿ ಸಾಗಲಿವೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ಸುಶಿಕ್ಷಿತರಾದ ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದೆಯಾಗಿ ಲೋಕಸಭೆಯನ್ನು ದಾವಣಗೆರೆ ಪರ, ರಾಜ್ಯದ ಪರ ಧ್ವನಿ ಎತ್ತಲಿದ್ದಾರೆ. ಮಧ್ಯ ಕರ್ನಾಟಕದ ನಮ್ಮ ಜಿಲ್ಲೆಗೆ ಅವಶ್ಯಕವಾದ ಐಟಿ ಬಿಟಿ ಮತ್ತು ಸಣ್ಣ, ದೊಡ್ಡ ಕೈಗಾರಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಹೋರಾಡಿ, ತರುತ್ತಾರೆಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಸಾಕಷ್ಟು ಹಿನ್ನಡೆಯಾಗಿದೆ. ಈಗ ಮೋದಿ ಅತಂತ್ರ ಸ್ಥಿತಿಯಲ್ಲೇ ಸರ್ಕಾರ ರಚಿಸುತ್ತಿದ್ದಾರೆ. ನಿತೀಶ್‌ ಕುಮಾರ, ಚಂದ್ರಬಾಬು ನಾಯ್ಡುರ ಸಂಯುಕ್ತವಾಗಿ ಸರ್ಕಾರ ತರಲು ಹೊರಟಿದ್ದಾರೆ. ಮೋದಿ ಯೋಜನೆಗಳಿಗೆ ಮಿತ್ರ ಪಕ್ಷಗಳು, ಮಿತ್ರ ಪಕ್ಷಗಳ ನಾಯಕರು ಅಡ್ಡಗಾಲು ಹಾಕುವುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಇದೊಂದು ಸ್ಥಿತರತೆ ಇಲ್ಲದೇ, ದುರ್ಬಲ, ಅಸ್ಥಿರ ಸರ್ಕಾರವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ವಿವರಿಸಿದರು.

ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಹಿರಿಯ ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ್, ಎ.ಬಿ.ರಹೀಂ, ಸವಿತಾ ಹುಲ್ಲುಮನೆ, ಮುಖಂಡರಾದ ಗಣೇಶ ಹುಲ್ಲುಮನೆ, ಎಸ್.ಎಂ.ಜಯಪ್ರಕಾಶ, ಡಿ.ಶಿವಕುಮಾರ, ಜಯಣ್ಣ, ನರೇಂದ್ರಕುಮಾರ ಇತರರು ಇದ್ದರು. ಬಿಜೆಪಿ ಬೇರುಗ‍ಳು ಸಡಿಲ:

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷದಿಂದ ಒಂದೇ ಪಕ್ಷ ಅಧಿಕಾರ ನಡೆಸುತ್ತಾ ಬಂದಿದ್ದು, ಅದೀಗ ಕೊನೆಗೊಂಡಿದೆ. ದಾವಣಗೆರೆಯಲ್ಲಿ ಈಗ ಅಭಿವೃದ್ಧಿ ಪರ್ವ ಡಾ.ಪ್ರಭಾ ಮಲ್ಲಿಕಾರ್ಜುನರ ಆಯ್ಕೆಯಾಗುವುದರೊಂದಿಗೆ ಪ್ರಾರಂಭಗೊಂಡಿದೆ. ಬಿಜೆಪಿಯ ಬೇರುಗಳು ದಾವಣಗೆರೆ ನಗರ, ಜಿಲ್ಲಾದ್ಯಂತ ಎಲ್ಲಾ ಕಡೆ ಸಡಿಲಗೊಂಡಿವೆ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ ಅಭಿಪ್ರಾಯಪಟ್ಟರು.ಬಿಜೆಪಿ ಕನಸು ನುಚ್ಚು ನೂರು:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಚಾರ್ ಸೌ ಪಾರ್ ಅಂತಿದ್ದವರು, ತೀನ್ ಸೌ ಸಹ ಪಾರ್ ಆಗಲಿಲ್ಲ. ಗೆದ್ದು ಬೀಗುತ್ತೇವೆಂದು ಹೊರಟಿದ್ದ ಬಿಜೆಪಿಯವರ ಕನಸ್ಸನ್ನು ಕಾಂಗ್ರೆಸ್ ಪಕ್ಷ ನುಚ್ಚು ನೂರು ಮಾಡಿ, ಮೋದಿ ಹವಾ ಎಲ್ಲಿಯೂ ಇಲ್ಲವೆಂಬುದನ್ನು ತೋರಿಸಿದೆ. ಕ್ಷೇತ್ರಕ್ಕೆ ಡಾ.ಪ್ರಭಾ ಮಲ್ಲಿಕಾರ್ಜುನ ಅನುದಾನ ತಂದು, ಅಭಿವೃದ್ಧಿ ಕೈಗೊಳ್ಳು ತ್ತಾರೆಂಬುದರಲ್ಲಿ ಸಂದೇಹವಿಲ್ಲ ಎಂದು ಮಾಜಿ ಉಪ ಮೇಯರ್, ಪಾಲಿಕೆ ಹಿರಿಯ ಸದಸ್ಯ ಅಬ್ದುಲ್ ಲತೀಫ್ ಹೇಳಿದರು.ಡಾ.ಪ್ರಭಾ ಗೆಲುವಿನ ಹಿನ್ನೆಲೆ ದೇವಿಗೆ ಈಡುಗಾಯಿ ಒಡೆದು ಹರಕೆ ತೀರಿಸಿದ ಕಾಂಗ್ರೆಸ್ಸಿಗರು

ದಾವಣಗೆರೆ: ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು 25 ವರ್ಷದ ನಂತರ ಕಾಂಗ್ರೆಸ್ಸಿಗೆ ಗೆದ್ದು ಕೊಟ್ಟ ಹಿನ್ನೆಲೆಯಲ್ಲಿ 18ನೇ ವಾರ್ಡ್‌ನ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿ, 101 ತೆಂಗಿನ ಕಾಯಿಗಳನ್ನು ದೇವಸ್ಥಾನದ ಅಂಗಳದಲ್ಲಿ ಒಡೆಯುವ ಮೂಲಕ ಹರಕೆ ತೀರಿಸಿದರು.

ಇಲ್ಲಿನ ಶ್ರೀ ಶಿವಾಜಿ ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶ್ರೀದೇವಿಗೆ ಶುಕ್ರವಾರ ಬೆಳಿಗ್ಗೆ ಪೂಜೆ ಸಲ್ಲಿಸಿ, ಡಾ.ಪ್ರಭಾ ಮಲ್ಲಿಕಾರ್ಜುನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ 101 ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ಹರಕೆ ತೀರಿಸಿ, ಸಂಭ್ರಮಿಸಿದರು.ನೇತೃತ್ವ ವಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಪಿ.ಎನ್.ಚಂದ್ರಶೇಖರ, ಪ್ರವೀಣರಾವ್ ಪವಾರ್, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸಬೇಕೆಂದು ದುಗಮ್ಮನಿಗೆ ಹರಕೆ ಮಾಡಿಕೊಂಡಿದ್ದೆವು. ನಮ್ಮ ಹರಕೆ ಫಲಿಸಿದ್ದು, ಇದೇ ಮೊದಲ ಬಾರಿಗೆ ಕ್ಷೇತ್ರದ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ. 25 ವರ್ಷದಿಂದ ಕಾಂಗ್ರೆಸ್ಸಿನ ಕೈತಪ್ಪಿ ಹೋಗಿದ್ದ ಕ್ಷೇತ್ರ ಇಂದು ಡಾ.ಪ್ರಭಾ ಮಲ್ಲಿಕಾರ್ಜುನರಿಂದಾಗಿ ನಮ್ಮ ಪಕ್ಷಕ್ಕೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸಿದ್ದು, ಕ್ಷೇತ್ರದ ಮತದಾರರು ಸೂಕ್ತ ಅಭ್ಯರ್ಥಿಯನ್ನೇ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಲು ಮತದಾರರು ಕಾರಣರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ಕ್ಷೇತ್ರದ ಅಭಿವೃದ್ಧಿಗೆ ಹಿರಿಯ ನಾಯಕರಾದ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಜೊತೆಗೆ ಕೈಜೋಡಿಸಲಿದ್ದಾರೆ ಎಂದರು.ವಾರ್ಡ್ ಅಧ್ಯಕ್ಷ ಪರಮೇಶ ಗುಡ್ಡಳ್ಳಿ, ಜಯರಾಜ ಸೋಗಿ, ಸುಧಾಕರ, ಮಂಜುನಾಥ, ರಾಜು ಭಂಡಾರಿ, ಗಾಯಕವಾಡ, ಅರುಣ ಪೈಲ್ವಾನ್, ಶಿವಕುಮಾರ, ಇನಾಯತ್, ಬಾಷಾ, ಕುಮಾರ ಕುಣಿ ಬೆಳಕೆರೆ, ಬಾಪೂಜಿ ಆಂಜನೇಯ, ಅವಿನಾಶ, ದೇವರಹಟ್ಟಿ ರುದ್ರಪ್ಪ ಇತರರು ಇದ್ದರು. ನಂತರ 18ನೇ ವಾರ್ಡ್‌ನ ಮನೆಗಳಿಗೆ ಯುವ ಮುಖಂಡ ಪ್ರವೀಣ ರಾವ್ ಪವಾರ್‌ ನೇತೃತ್ವದಲ್ಲಿ ಸಿಹಿ ಹಂಚಲಾಯಿತು.

ರಾಹುಲ್ ಸಭೆಯಲ್ಲಿ ಸೂತನ ಸಂಸದೆ ಡಾ.ಪ್ರಭಾ ಭಾಗಿ

ದಾವಣಗೆರೆ: ದಾವಣಗೆರೆ ಲೋಕಸಭೆ ಪ್ರಥಮ ಮಹಿಳಾ ಸದಸ್ಯೆಯಾಗಿ, 25 ವರ್ಷದ ನಂತರ ಕಾಂಗ್ರೆಸ್ಸಿಗೆ ಕ್ಷೇತ್ರವನ್ನು ಗೆದ್ದು ಕೊಟ್ಟ ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದೆಯಾದ ನಂತರ ಇದೇ ಮೊದಲ ಸಲ ಬೆಂಗಳೂರಿಗೆ ತೆರಳಿ, ಎಐಸಿಸಿ ನಾಯಕ ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದರು.ಬೆಂಗಳೂರಿನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ನೂತನ ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರಲ್ಲದೇ, ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ನೂತನ ಸಂಸದ-ಸಂಸದೆಯರಿಗೆ ಶುಭಾರೈಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಸಭೆಯಲ್ಲಿದ್ದರು. ನಂತರ ರಾಹುಲ್ ಗಾಂಧಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ 25 ವರ್ಷಗಳ ನಂತರ ಬಿಜೆಪಿಯ ವಿರುದ್ಧ ಜಯ ಸಾಧಿಸಿ, ಕಾಂಗ್ರೆಸ್ಸಿಗೆ ಕ್ಷೇತ್ರವನ್ನು ಮರು ಗೆದ್ದು ಕೊಟ್ಟಿದ್ದಕ್ಕೆ ಅಭಿನಂದಿಸಿದರು.