ಕನ್ನಡಪ್ರಭವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದ ರೈತರು ಶುಕ್ರವಾರ ನಿರಶನ ಅಂತ್ಯಗೊಳಿಸಿದ್ದಾರೆ. ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಸತ್ಯಾಗ್ರಹಿ ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಎಳನೀರು ಕುಡಿಸುವುದರ ಮೂಲಕ ಉಪವಾಸ ಅಂತ್ಯಗೊಳಿಸಿದರು.

ನಂತರ ಮಾತನಾಡಿದ ಶ್ರೀಗಳು, ಜಗತ್ತಿಗೆ ಅನ್ನ ಕೊಡುವ ಅನ್ನದಾತ ಉಪವಾಸ ಬೀಳಬೇಕಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದ ಸರ್ಕಾರಗಳನ್ನೇ ಬೀಳಿಸುವ ತಾಕತ್ತು ಪ್ರದರ್ಶಿಸಬೇಕು. ರೈತರು ಉಪವಾಸ ಕುಳಿತಿರುವುದು ಕೇಳಿ ಮನಸ್ಸಿಗೆ ನೋವು ಆಯ್ತು. ಅನ್ನದಾತ ಉಪವಾಸ ಇರಬಾರದು. ಸರ್ಕಾರದ ಮೇಲೆ ಒತ್ತಡ ತರಲು ಬೇರೆ ಮಾರ್ಗದ ಹೋರಾಟ ಕೈಗೊಳ್ಳಬೇಕೆಂದು ತಿಳಿಸಲು ಬಂದಿದ್ದೇನೆ. ನನ್ನ ಮನವಿಗೆ ಸ್ಪಂದಿಸಿ ಉಪವಾಸ ಚಳವಳಿ ಕೈಬಿಟ್ಟಿರುವುದು ಸಂತಸ ತಂದಿದೆ ಎಂದರು.

ಬಳಿಕ ಮಾತನಾಡಿದ ಕೆ.ಟಿ.ತಿಪ್ಪೇಸ್ವಾಮಿ, ಈ ಬಾರಿ ಬಜೆಟ್‌ನಲ್ಲಿ 5 ಸಾವಿರ ಕೋಟಿ ರು. ಅನುದಾನ ಭದ್ರಾ ಯೋಜನಗೆ ಮೀಸಲಿಡಬೇಕೆಂದು ಆಗ್ರಹಿಸಲಾಗಿತ್ತು. ಜೊತೆಗೆ ಸಚಿವರು, ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ ತಂದಿದ್ದರು. ಆದರೆ, ಹಣವನ್ನು ಹಂಚಿಕೆ ಮಾಡಿಲ್ಲದಿರುವುದು ಬೇಸರ ತರಿಸಿದೆ ಎಂದರು.

ರೈತಸಂಘ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ನರೇನಹಳ್ಳಿ ಅರುಣ್‌ಕುಮಾರ್, ಆರ್.ಶೇಷಣ್ಣಕುಮಾರ್, ಮುಖಂಡರಾದ ಕೊರಟಗೆರೆ ಮಹೇಶ್ವರಪ್ಪ, ರಂಗಸ್ವಾಮಿ, ಚಿತ್ತಪ್ಪ, ನಿರಂಜನಮೂರ್ತಿ, ರೆಡ್ಡಿಹಳ್ಳಿ ವೀರಣ್ಣ, ಇಂಧೂದರ, ಜಯಣ್ಣ, ಕರಿಸಿದ್ದಯ್ಯ, ಚಂದ್ರಮೌಳಿ, ಸತೀಶ್, ಪ್ರಶಾಂತ್ ರೆಡ್ಡಿ, ತಿಮ್ಮಣ್ಣ, ಬಸ್ತಿಹಳ್ಳಿ ಸುರೇಶ್‌ಬಾಬು, ಚಳ್ಳಕೆರೆ ಬಸವರಾಜ್, ಜೋಗಿಮಟ್ಟಿ ಮಹೇಶಬಾಬು ಇತರರಿದ್ದರು.


*ಕೆ.ಟಿ.ತಿಪ್ಪೇಸ್ವಾಮಿ ಅಸ್ವಸ್ತ,ಆಸ್ಪತ್ರೆಗೆ ದಾಖಲು: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಹಿರಿಯೂರಿನ ತಮ್ಮ ನಿವಾಸಕ್ಕೆ ತೆರಳಿದ ಕೆ.ಟಿ.ತಿಪ್ಪೇಸ್ವಾಮಿ ನಿತ್ರಾಣಗೊಂಡು ಕುಸಿದು ಬಿದ್ದಿದ್ದು ತಕ್ಷಣವೇ ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಟುಂಬಸ್ಥರು, ರೈತ ಮುಖಂಡರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಕಾರಣಕ್ಕೆ ವೈದ್ಯರ ಸೂಚನೆ ಮೇರೆಗೆ ತುಮಕೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿಪ್ಪೇಸ್ವಾಮಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.