ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಏ.26 ರಂದು ಚುನಾವಣೆ ಸಂಬಂಧ ಮತದಾನ ಅಂತ್ಯಗೊಳ್ಳುವುದಕ್ಕೆ ನಿಗದಿಯಾಗಿರುವ ಸಮಯದ 48 ಗಂಟೆಗಳ ಮೊದಲು ಎಲ್ಲಾ ರೀತಿಯ ಬಹಿರಂಗ ಪ್ರಚಾರ ನಿಷೇಧಿಸಿರುವುದರಿಂದ ಬಹಿರಂಗ ಪ್ರಚಾರವು ಏ.24ರ ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಎಲ್ಲಾ ರೀತಿಯ ಬಹಿರಂಗ ಪ್ರಚಾರ ಟೆಲಿವಿಷನ್/ ರೇಡಿಯೋ ಹಾಗೂ ಕೇಬಲ್ ನೆಟ್ ವರ್ಕ್ ಇಂತಹ ಇತರೆ ಮಾಧ್ಯಮದಲ್ಲಿ ಚುನಾವಣಾ ವಿಷಯ ಚರ್ಚೆ, ಪ್ರಚಾರ, ಸಂದರ್ಶನ, ಜಾಹೀರಾತು ಹಾಗೂ ಚುನಾವಣೆ ಸಂಬಂಧಿತ ಅಭಿಪ್ರಾಯಗಳ ಪ್ರಸಾರಗಳು ಈ ನಿಷೇಧಕ್ಕೆ ಒಳಪಡಲಿವೆ ಎಂದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಏ.24ರ ಸಂಜೆ 6 ರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಈ ಸಮಯದಲ್ಲಿ 5 ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರತಕ್ಕದ್ದಲ್ಲ. ಇದು ಚುನಾವಣಾ ಪ್ರಚಾರಕ್ಕೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಮದ್ಯಪಾನ ನಿಷೇಧ, ಸಂತೆ ಜಾತ್ರೆ ಮುಂದೂಡಿಕೆ:
ಏ.24ರ ಸಂಜೆ 5 ರಿಂದ ಏ.26ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಪಾನ ನಿರೋಧ (ಒಣ) ದಿನಗಳೆಂದು ಘೋಷಿಸಲಾಗಿದೆ. ಹಾಗೆಯೇ, ಏ.26 ರಂದು ನಡೆಯುವ ಎಲ್ಲಾ ಸಂತೆ ಜಾತ್ರೆ ಮತ್ತು ಉತ್ಸವಗಳನ್ನು ಮುಂದೂಡಿ ಆದೇಶಿಸಲಾಗಿದೆ ಎಂದರು.ಮತಗಟ್ಟೆಗಳಲ್ಲಿ ಮೊಬೈಲ್ ಫೋನ್, ಕ್ಯಾಮೆರಾ ನಿಷೇಧ:
ಮತದಾನದ ದಿನದಂದು ಮತದಾರರು ಮೊಬೈಲ್ ಫೋನ್ ಗಳನ್ನಾಗಲೀ ಅಥವಾ ಕ್ಯಾಮರಾಗಳನ್ನಾಗಲೀ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್ ಫೋನ್ ಗಳನ್ನು ಮತ್ತು ಕ್ಯಾಮರಾಗಳನ್ನು ತೆಗೆದುಕೊಂಡು ಛಾಯಾಚಿತ್ರಗಳನ್ನು ತೆಗೆಯುವುದು ಮತದಾನದ ರಹಸ್ಯ ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ, ಮತದಾರರ ಮತಗಟ್ಟೆಗಳಿಗೆ ಮೊಬೈಲ್ ಅಥವಾ ಕ್ಯಾಮರಾಗಳನ್ನು ತೆಗೆದುಕೊಂಡು ಹೋದಲ್ಲಿ ಇವುಗಳನ್ನು ಅಧ್ಯಕ್ಷಾಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಳ್ಳುವರು ಎಂದರು.ಮತಗಟ್ಟೆಗಳಿಗೆ ಬಿಗಿ ಭದ್ರತೆ:
ಮತ ಕೇಂದ್ರಗಳಲ್ಲಿ ಸಿಎಪಿಎಫ್, ಪೊಲೀಸ್ ಸಿಬ್ಬಂದಿ, ಗೃಹರಕ್ಷರನ್ನು ಭದ್ರತಾ ದೃಷ್ಟಿಯಿಂದ ನೇಮಿಲಾಗುತ್ತಿದ್ದು ಹಾಗೂ ಆಯ್ದ ಮತಗಟ್ಟೆಗಳಲ್ಲಿ ಮೈಕ್ರೊ ಅಬ್ಸರ್ವರ್ ಗಳ ನೇಮಕ, ವೀಡಿಯೋ ಚೀತ್ರೀಕರಣದ ವ್ಯವಸ್ಥೆ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಶೇ.100 ರಷ್ಟು ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆಗೆ ಮಾಡಲಾಗಿದೆ ಎಂದರು.ಕ್ಷೇತ್ರದಲ್ಲಿ 41 ವಲ್ನರವೆಲ್ ಮತಗಟ್ಟೆಗಳು, 435 ಕ್ರಿಟಿಕಲ್ ಮತಗಟ್ಟೆಗಳಿದ್ದು, ಇವುಗಳಿಗೆ 495 ಮೈಕ್ರೋ ಅಬ್ಸರ್ ವರ್ ಗಳನ್ನು ನೇಮಿಸಲಾಗಿದೆ. ಮತದಾನ ಮಾಡಲು ಮತಗಟ್ಟೆಗೆ ಬರುವ ಮತದಾರರು ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಗುರುತಿಗಾಗಿ ಹಾಜರುಪಡಿಸುವುದು. ಅದು ಇಲ್ಲದ ಮತದಾರರು ಈ ಕೆಳಕಂಡ 11 ದಾಖಲಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ಗುರುತಿಗಾಗಿ ತೋರಿಸಬೇಕು ಎಂದು ಅವರು ತಿಳಿಸಿದರು.
ರಾಜಕೀಯ ಚಟುವಟಿಕೆಗಳಿಗೆ ನಿಷೇಧ:ಮತದಾನದ ಮುಕ್ತಾಯಕ್ಕೆ 48 ಗಂಟೆಯು ಮುಂಚಿತವಾಗಿ ಮೈಸೂರು ಲೋಕಸಭಾ ಕ್ಷೇತ್ರದ ಮತದಾರರರಲ್ಲದವರು ಬಹಿರಂಗ ಪ್ರಚಾರ ಅಂತ್ಯವಾದ ನಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗುವಂತಿಲ್ಲ. ಆದ್ದರಿಂದ ಮೈಸೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ತಮ್ಮ ಕ್ಷೇತ್ರಕ್ಕೆ ತೆರಳತಕ್ಕದ್ದು. ಇದು ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಬಂದಿರುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದರು.
ಕಲ್ಯಾಣ ಮಂಟಪ, ಸಮುದಾಯ ಭವನ, ವಸತಿ ಗೃಹಗಳು, ಅತಿಥಿ ಗೃಹಗಳು (ಖಾಸಗಿ) ಈ ಕ್ಷೇತ್ರದ ಮತದಾರರಲ್ಲದವರು ವಾಸ್ತವ್ಯ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಹಾಗೂ ತೀವ್ರ ನಿಗಾ ಇಡಲಾಗುವುದು. 48 ಗಂಟೆಯ ಮುಂಚಿತವಾಗಿ ಲೌಡ್ ಸ್ಪೀಕರ್ ಅನುಮತಿ ಇರುವುದಿಲ್ಲ. ಮತಗಟ್ಟೆಯ 100 ಮೀ. ಸುತ್ತಳತೆಯಲ್ಲಿ ಪ್ರಚಾರ ಮಾಡುವಂತಿಲ್ಲ. ಮತದಾನದ ದಿನದಂದು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿಚಾರಣೆ, ದೂರುಗಳನ್ನು 1950 ಮುಖಾಂತರ ನಿರ್ವಹಿಸಲಾಗುವುದು ಎಂದು ಅವರು ಹೇಳಿದರು.ಭದ್ರತಾ ಕೊಠಡಿ- 3 ಹಂತದ ಭದ್ರತೆ:
ಮತದಾನವು ಪೂರ್ಣಗೊಂಡ ನಂತರ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್) ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ ಮಸ್ಟರಿಂಗ್ ಸ್ಥಳದಿಂದ ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳ ತರುವರು ಎಂದರು.ಭದ್ರತಾ ಕೊಠಡಿಗೆ 3 ಹಂತದಲ್ಲಿ ಭದ್ರತೆಯನ್ನು ಒದಗಿಸಲಾಗಿರುತ್ತದೆ. 1ನೇ ಹಂತದಲ್ಲಿ ಸಿಎಪಿಎಫ್ ತುಕಡಿಯಿಂದ, 2ನೇ ಹಂತದಲ್ಲಿ ಸಶಸ್ತ್ರ ಮೀಸಲು ಪಡೆ, 3ನೇ ಹಂತದಲ್ಲಿ ಸ್ಥಳೀಯ ಪೊಲೀಸರು ಭದ್ರತೆ ಒದಗಿಸುವರು. ಅಲ್ಲದೆ, ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಲಾಗಿದ್ದು ಹಾಗೂ ಭದ್ರತಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಲಾಗ್ ಬುಕ್ ನಲ್ಲಿ ನಮೂದಿಸಿವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.ಮತದಾನ ಎಲ್ಲರ ಸಾಂವಿಧಾನಕ ಹಕ್ಕು, ಏ.26 ರಂದು ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ಸಾರ್ವಜನಿಕರು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳು ಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ಅಗತ್ಯ ಸಹಕಾರ ನೀಡಬೇಕು.
- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ