ಸಾರಾಂಶ
ಕೊಪ್ಪಳ: ಅಂತರ್ಜಾತಿ ವಿವಾಹವಾದವರಿಗೆ ಬಹಿಷ್ಕಾರ ಹಾಕಿದ ಅಮಾನವೀಯ ಪ್ರಕರಣವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗುರುವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಸಂಧಾನದೊಂದಿಗೆ ಅಂತ್ಯಗೊಳಿಸಿದ್ದಾರೆ.ನಾಯಕ ಸಮಾಜದ ಹಿರಿಯರು ಮತ್ತು ಬಹಿಷ್ಕಾರಕ್ಕೆ ತುತ್ತಾದ ಮೂರು ಕುಟುಂಬಗಳ ಪ್ರತಿನಿಧಿಗಳು ಸಭೆಗೆ ಹಾಜರಾಗಿ ತಮಗೆ ಆಗುತ್ತಿರುವ ಅನ್ಯಾಯ ಮತ್ತು ಬಹಿಷ್ಕಾರದ ಕುರಿತು ಸಮಾಜ ಕಲ್ಯಾಣಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು.ಬಳಿಕ ನಾಯಕ ಸಮಾಜದ ಹಿರಿಯರು ಸಹ ಸಮಾಜದಲ್ಲಿ ಇದುವರೆಗೂ ನಡೆದು ಬಂದ ಸಭೆಗಳ ವಿವರಣೆ ನೀಡಿದರು. ನಾವು ಅವರಿಗೆ ಬಹಿಷ್ಕಾರ ಹಾಕಿಲ್ಲ; ದಂಡವನ್ನೂ ಹಾಕಿಲ್ಲ ಎನ್ನುವ ವಾದ ಮಂಡಿಸುತ್ತಲೇ ಸಾಗಿದರು. ಕೊನೆಗೆ ಇನ್ಮುಂದೆ ಯಾರಿಗೂ ದಂಡ ವಿಧಿಸದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.ರಾಜೀಪತ್ರ:
ಬಹಿಷ್ಕಾರಕ್ಕೊಳಗಾದವರನ್ನು ಇನ್ಮುಂದೆ ಸಮಾಜದ ಕಾರ್ಯಗಳಿಗೆ ಕರೆಯಬೇಕು. ಅವರ ಮನೆಗೂ ಎಲ್ಲರೂ ಹೋಗಬೇಕು. ದಂಡ ವಿಧಿಸುವಂತೆಯೇ ಇಲ್ಲ ಎನ್ನುವ ರಾಜೀಪತ್ರಕ್ಕೆ ಎರಡೂ ಕಡೆಯವರಿಂದ ರುಜು ಮಾಡಿಸಿ, ಇತ್ಯರ್ಥ ಪಡಿಸಲಾಯಿತು.ಹಲವು ಪ್ರಕರಣಗಳು:ಭಾಗ್ಯನಗರ ನಾಯಕ ಸಮಾಜದಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಡ ವಿಧಿಸಿದ ಹಲವು ಪ್ರಕರಣಗಳು ನಡೆದಿವೆ. ಆರೇಳು ವರ್ಷಗಳಿಂದಲೂ ಮೂರು ಕುಟುಂಬಗಳು ಬಹಿಷ್ಕಾರಕ್ಕೆ ತುತ್ತಾಗಿವೆ. ಇದರಲ್ಲಿ ಇಬ್ಬರು ದಂಡ ಕಟ್ಟಿ, ಸಮಸ್ಯೆ ಇತ್ಯರ್ಥ ಮಾಡಿಕೊಂಡಿದ್ದರೆ ಇನ್ನೊಂದು ಕುಟುಂಬ ಗುರುವಾರ ರಾಜಿ ಸಭೆಗೆ ಹಾಜರಾಗಿ ತಮ್ಮ ಅಳಲು ತೋಡಿಕೊಂಡರು. ನಮಗೂ ಕಳೆದ ಏಳು ವರ್ಷಗಳಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಹೇಳಿದರು.ಈ ಎಲ್ಲ ಪ್ರಕರಣಗಳನ್ನು ಒಳಗೊಂಡು ರಾಜಿ ಮಾಡಲಾಯಿತಾದರೂ ದಂಡ ಹಾಕಿದ್ದಕ್ಕೆ ಮತ್ತು ಬಹಿಷ್ಕಾರ ಹಾಕಿದ್ದಕ್ಕೆ ಯಾರ ಮೇಲೆಯೂ ಕ್ರಮವಾಗದೆ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ಅಧಿಕಾರಿಗಳ ನಡೆಗೂ ಆಕ್ರೋಶ:ಬಹಿಷ್ಕಾರ ಹಾಕಿರುವ ಕುರಿತು ಬಹಿಷ್ಕಾರಕ್ಕೆ ತುತ್ತಾದವರೇ ಲಿಖಿತ ದೂರು ನೀಡಲು ಮುಂದಾದರೂ ರಾಜಿ ಮಾಡಿ ಅಂತ್ಯ ಮಾಡಿರುವ ಅಧಿಕಾರಿಗಳ ನಡೆಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೇವಲ ಬೆಳಕಿಗೆ ಬಂದಿರುವ ಪ್ರಕರಣಗಳು ಅಷ್ಟೇ ಅಲ್ಲ, ಇನ್ನು ಕೆಲವು ಪ್ರಕರಣಗಳಲ್ಲಿಯೂ ಬಹಿಷ್ಕಾರ ಹಾಕಿರುವುದು ಬೆಳಕಿಗೆ ಬಂದಿದ್ದರೂ ಜಿಲ್ಲಾಡಳಿತ ಮಾತ್ರ ಜಾಣಕುರುಡತನ ಪ್ರದರ್ಶನ ಮಾಡಿದ್ದು ಮಾತ್ರ ಸೋಜಿಗದ ಸಂಗತಿ.ಮಾಹಿತಿ ಬಂದ ತಕ್ಷಣ ತಾಲೂಕು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಷ್ಟೇನೂ ಗಂಭೀರ ವಿಷಯವಲ್ಲವಂತೆ. ಹೀಗಾಗಿ, ಪರಿಶೀಲಿಸುತ್ತೇವೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ.
ಹಿರಿಯರು ಮತ್ತು ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿತಿಕೆಯಲ್ಲಿ ರಾಜಿ ಮಾಡಿದ್ದಾರೆ. ಇನ್ಮುಂದೆ ಬಹಿಷ್ಕಾರ ಹಾಕುವುದಿಲ್ಲ ಮತ್ತು ದಂಡ ವಿಧಿಸುವುದಿಲ್ಲ ಎಂದಿದ್ದಾರೆ ಎನ್ನುತ್ತಾರೆ ಬಹಿಷ್ಕಾರಕ್ಕೆ ಒಳಗಾಗಿದ್ದ ಶಂಕ್ರಪ್ಪ ಬೇವಿನಹಳ್ಳಿ.