ಯುರೋಪ್ ಮತ್ತು ಮಧ್ಯ ಏಷ್ಯಾದ ವಲಸೆ ಪಕ್ಷಿಯಾದ ಸಣ್ಣ ಕೊಂಬಿನ ಗೂಬೆ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೀವ ವೈವಿಧ್ಯ ಸಂಶೋಧಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಎಸ್.ಎಂ.ಸೈಯದ್
ಕನ್ನಡಪ್ರಭ ವಾರ್ತೆ ಗಜೇಂದ್ರಗಡ (ಗದಗ)ಯುರೋಪ್ ಮತ್ತು ಮಧ್ಯ ಏಷ್ಯಾದ ವಲಸೆ ಪಕ್ಷಿಯಾದ ಸಣ್ಣ ಕೊಂಬಿನ ಗೂಬೆ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೀವ ವೈವಿಧ್ಯ ಸಂಶೋಧಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಈ ಗೂಬೆ ಪ್ರಭೇದವನ್ನು ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಬೆಂಗಳೂರು ಮತ್ತು ಹಾಸನ, ತುಮಕೂರಿನಲ್ಲಿ ಪತ್ತೆಯಾಗಿತ್ತು. ಅಲ್ಲದೇ ಕಳೆದ ವರ್ಷ ರಾಯಚೂರು ಜಿಲ್ಲೆಗಳಲ್ಲಿ ಗುರುತಿಸಲಾಗಿತ್ತು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಹೊಂದಿಕೊಂಡಿರುವ ಗುಡ್ಡಗಾಡು ಪ್ರದೇಶದಲ್ಲಿ ಇತ್ತೀಚೆಗೆ ಅವನತಿ ಅಂಚಿನಲ್ಲಿರುವ ಪಕ್ಷಿಗಳು ಹಾಗೂ ಪ್ರಾಣಿಗಳು ಕಾಣಸಿಗುತ್ತಿರುವುದು ಇಲ್ಲಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಖುಷಿ ತಂದಿದೆ. ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯವಾಗಿ ಗೋಚರಿಸಿದ್ದು ತೀರಾ ವಿರಳ. ಈ ಗೂಬೆ ಪ್ರಭೇದವು ಸಾಮಾನ್ಯವಾಗಿ ಹುಲ್ಲುಗಾವಲು ಮತ್ತು ಸರೋವರ ಪ್ರದೇಶಗಳಲ್ಲಿ ಕಂಡುಬರುತ್ತದೆ. ಸಣ್ಣ ಕೊಂಬೆಯ ಗೂಬೆಗಳು ತಮ್ಮ ವಿಶಿಷ್ಟ ಮತ್ತು ವಿಶೇಷ ನಡವಳಿಕೆಗೆ ಹೆಸರುವಾಸಿಯಾಗಿವೆ. ಅವುಗಳ ಹಾರಾಟ, ಬೇಟೆಯಾಡುವ ಸಾಮರ್ಥ್ಯಗಳು ಮತ್ತು ಪ್ರಣಯ ಪ್ರದರ್ಶನ ತುಂಬಾ ವಿಶೇಷ. ಸ್ಟ್ರಿಗಿಡೇ ಕುಟುಂಬ:ಹುಲ್ಲುಗಾವಲಿನ ಪರಿಸರ ವ್ಯವಸ್ಥೆಯ ಪ್ರಭೇದವಾಗಿದೆ. ಆಸಿಯೋ ಕುಲಕ್ಕೆ ಸೇರಿದ ಗೂಬೆಗಳನ್ನು ಕಿವಿಯ ಗೂಬೆಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಸಸ್ತನಿಗಳ ಕಿವಿಗಳನ್ನು ಹೋಲುವ ಗರಿಗಳನ್ನು ಹೊಂದಿವೆ, ಈ ‘ಕಿವಿ’ ಗೊಂಚಲುಗಳು ಗೋಚರಿಸಬಹುದು ಅಥವಾ ಗೋಚರಿಸದೇ ಇರಬಹುದು. ಸಣ್ಣ ಕೊಂಬಿನ ಗೂಬೆ ತನ್ನ ಸಣ್ಣ ಟಫ್ಟ್ (ಗರಿಗಳ ಗುಚ್ಛ)ಗಳನ್ನು ರಕ್ಷಣಾತ್ಮಕ ಭಂಗಿಯಲ್ಲಿ ಮಾತ್ರ ಪ್ರದರ್ಶಿಸುತ್ತದೆ.