ಸಾರಾಂಶ
ರಾಮನಗರ: ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವಂತಹ ಇಂಧನ ಇಲಾಖೆಯ ಅವೈಜ್ಞಾನಿಕ ತೀರ್ಮಾನಗಳಿಂದ ರೈತರು ಹಾಗೂ ವಿದ್ಯುತ್ ಗ್ರಾಹಕರ ಮೇಲೆ ತೀವ್ರ ತರವಾದ ಹೊರೆಯಾಗುತ್ತಿದೆ. ಇಂತಹ ನಿರ್ಧಾರಗಳನ್ನು ಹಿಂಪಡೆಯಬೇಕು ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೆಂಕಟೇಶ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರ ಕಿಸೆಯಿಂದ ಸ್ಮಾರ್ಟ್ ಆಗಿ ಸಾವಿರಾರು ಕೋಟಿ ರು. ಸುಲಿಗೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಸಲು ವಿಫಲವಾಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಸರ್ಕಾರ, ದುಬಾರಿ, ಅನಗತ್ಯ ಸ್ಮಾರ್ಟ್ ಮೀಟರ್ ಖರೀದಿಸಲು ಕಡ್ಡಾಯ ಮಾಡುವ ಯೋಜನೆಯೊಂದನ್ನು ರೂಪಿಸಿದೆ. ಈ ಬಗ್ಗೆ ವ್ಯಾಪಕವಾಗಿ ವಿರೋಧ ಮತ್ತು ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಅಥವಾ ಎಸ್ಕಾಂಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ವಿತರಣೆಯನ್ನು ಪರಿಣಾಮಕಾರಿಯಾಗಿಸಲು ಆರ್‌ಡಿಡಿಎಸ್ ಯೋಜನೆಯನ್ನು ಜಾರಿಗೆ ತಂದು ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವನ್ನೂ ಘೋಷಿಸಿತ್ತು. ಅನೇಕ ರಾಜ್ಯಗಳು ಇದರ ಉಪಯೋಗ ಪಡೆದುಕೊಂಡಿದ್ದರೆ, ಕರ್ನಾಟಕ ಮಾತ್ರ ಇನ್ನೂ ಈ ಯೋಜನೆಯ ನೆರವನ್ನು ಪಡೆದುಕೊಂಡಿಲ್ಲ ಎಂದರು.ಈಗ ರಾಜ್ಯ ಸರ್ಕಾರ ಎಸ್ಕಾಂಗಳ ಉದ್ಧಾರಕ್ಕಾಗಿ ಎಂದು ಬಿಂಬಿಸಿ ಪರಿಚಯಿಸಲು ಮುಂದಾಗಿರುವ ಸದರಿ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ರೂಪಿಸುವಾಗ ಮಾತ್ರ ಸಿಇಎ ಮತ್ತು ಕೆಇಆರ್‌ಸಿ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿದೆ. ಸರ್ಕಾರದ ಈ ಅವಸರದ ಹಿಂದಿರುವುದು ಮಾತ್ರ ಗ್ರಾಹಕರ ಜೇಬಿಗೆ ಕತ್ತರಿ ಹಾಕಿ, ಕೆಲ ಅಧಿಕಾರಿಗಳ ಮತ್ತು ಅಧಿಕಾರಸ್ಥರ ತಿಜೋರಿ ತುಂಬಿಸುವ ಹುನ್ನಾರವಾಗಿದೆ ಎಂದು ಟೀಕಿಸಿದರು.
ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ:ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ರೂಪಿಸುವಾಗ ಸರ್ಕಾರ ಕೆಲವು ಹಂತಗಳನ್ನು ಅನುಸರಿಸಬೇಕಿತ್ತು. ಈ ಹಂತಗಳನ್ನು ಪಾಲಿಸಿದಾಗಲಷ್ಟೇ ಸಾವಿರಾರು ಕೋಟಿ ವೆಚ್ಚದ ಈ ಯೋಜನೆಯ ಸಂಪೂರ್ಣ ಉಪಯೋಗ ಸಿಗುವುದು. ಆದರೆ, ಸರ್ಕಾರ ಮೊದಲ ಎರಡು ಹಂತಗಳನ್ನು ನಿರ್ಲಕ್ಷಿಸಿ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವ ಅವೈಜ್ಞಾನಿಕ, ಅಪ್ರಸ್ತುತ, ಅಪ್ರಯೋಜಕ ಕೆಲಸಕ್ಕೆ ಮುಂದಾಗಿದೆ ಎಂದರು.
ಕೆಇಅರ್‌ಸಿ ನಿಯಮದ ಪ್ರಕಾರ ಸರ್ಕಾರ ಅಥವಾ ಎಸ್ಕಾಂಗಳು ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವಂತೆಯೇ ಇಲ್ಲ. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ. ಈ ಕಸರತ್ತಿನ ಹಿಂದಿರುವ ಏಕೈಕ ಉದ್ದೇಶ ಗ್ರಾಹಕರಿಂದ ಹಣ ದೋಚಿ ತಮ್ಮ ತಿಜೋರಿ ತುಂಬಿಸಿಕೊಳ್ಳುವುದಾಗಿದೆ ಎಂದು ಆರೋಪಿಸಿದರು.ಬೆಸ್ಕಾಂ ಕಚೇರಿಯಿಂದ ಮುಂಬರುವ ಎಲ್ಲಾ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಫೆ.15ರಂದು ಆದೇಶ ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು.
ಹೊಸ ಸ್ಮಾರ್ಟ್ ಮೀಟರ್‌ನ ಬೆಲೆ ಅತಿ ಹೆಚ್ಚಾಗಿದ್ದು ಗ್ರಾಹಕರಿಗೆ ಹೊರೆಯಾಗುವ ಮುನ್ಸೂಚನೆಗಳು ಹೆಚ್ಚಾಗಿವೆ. ಸಿಇಎ ಹಾಗೂ ಕೆಇಆರ್‌ಸಿ ನಿಯಮಗಳ ಪ್ರಕಾರ ಎಲ್ಲೂ ಹೊಸ ವಿದ್ಯುತ್ ಸಂಪರ್ಕಗಳಿಗೆ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕು ಆದೇಶ ಇಲ್ಲ ಎಂದು ಹೇಳಿದರು.ಹೀಗಾಗಿ ಬೆಸ್ಕಾಂ ಕೇಂದ್ರ ಕಚೇರಿಯಿಂದ ಹೊರಡಿಸಿರುವ ಪತ್ರವನ್ನು ಹಿಂಪಡೆಯಬೇಕು. ದೇಶದ ಬೇರೆ ರಾಜ್ಯಗಳಲ್ಲೆಲ್ಲ ಉಚಿತ ಮಾಪಕಗಳನ್ನು ಕೊಟ್ಟಿದ್ದು ಹಾಗೂ ಹಳೆಯ ಸಂಪರ್ಕಗಳಿಗೆ ಮೊದಲು ಬದಲಾಯಿಸಿ ಗ್ರಾಹಕರಿಗೆ ಬೇಕಾದರೆ ಮಾತ್ರವೇ ಮಾಪಕಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.
ಸ್ಮಾರ್ಟ್ ಮೀಟರ್ ನೆಪದಲ್ಲಿ ಹೊಸ ಗ್ರಾಹಕರಿಗೆ ಸಿಗಬೇಕಾದ ಗೃಹಜೋತಿ ಫಲಾನುಭವಿಗಳಿಗೆ ಕತ್ತರಿ ಹಾಕಲು ಬೆಸ್ಕಾಂ ಇಲಾಖೆ ಪಿತೂರಿಗೆ ಮುಂದಾಗಿದೆ. ಹಾಗಾಗಿ ಈ ಗ್ರಾಹಕರ ವಿರೋಧಿ ನೀತಿಯನ್ನು ಹಿಂಪಡೆದು ಕಾನೂನಾತ್ಮಕವಾಗಿ ವಿದ್ಯುತ್ ಗ್ರಾಹಕರಿಗೆ ಸಹಕಾರಿಯಾಗುವ ರೀತಿಯಲ್ಲಿ ಹೊಸ ಆದೇಶವನ್ನು ಹೊರಡಿಸಬೇಕು ಎಂದು ವೆಂಕಟೇಶ್ ಆಗ್ರಹಿಸಿದರು.ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ. ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ. ಬಿಡದಿ ಹೋಬಳಿಯಲ್ಲಿ ಟೌನ್ ಶಿಪ್ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನನ್ನು ಕಸಿದುಕೊಳ್ಳಲು ಮುಂದಾಗಿದೆ. ಮುಂದಿನ ದಿನಳಲ್ಲಿ ಬಿಡದಿ ಭಾಗದ ರೈತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಗೋಪಾಲ್, ಕಾರ್ಯದರ್ಶಿ ಪುಟ್ಟರಾಜು, ಬಿಡದಿ ಸಮಿತಿ ಅಧ್ಯಕ್ಷ ಇಟ್ಟಮಡು ಶ್ರೀಧರ್, ಚನ್ನಪಟ್ಟಣ ತಾಲ್ಲೂಕು ಸಮಿತಿ ಅಧ್ಯಕ್ಷ ಕುಮಾರ್, ಪದಾಧಿಕಾರಿಗಳಾದ ರಂಗಸ್ವಾಮಿ, ಬಸವರಾಜು, ಶ್ರೀನಿವಾಸ್, ಸಂತೋಷ, ಉಮೇಶ್, ಮಾರಣ್ಣ ಇತರರಿದ್ದರು.26ಕೆಆರ್ ಎಂಎನ್ 2.ಜೆಪಿಜಿ
ರಾಮನಗರದಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾದ್ಯಕ್ಷ ಕೆ.ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.