ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಅನುಷ್ಠಾನಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಇಂದು ಶಕ್ತಿ ಸಂಭ್ರಮ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಪೃಥ್ವಿ ಜಯರಾಮ್ ಹಾಗೂ ಆಲೂರು ಸಕಲೇಶಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಸಕಲೇಶಪುರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುರುಳಿ ಮೋಹನ್ ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಹಾಗೂ ಚಾಲಕ ನಿರ್ವಾಹಕರಿಗೆ ಸನ್ಮಾನಿಸಿ ಗೌರವಿಸಿ ಸಂಭ್ರಮಾಚರಣೆ ಮಾಡಿದರು.
ರಾಜ್ಯಾದ್ಯಂತ ಶಕ್ತಿಯೋಜನೆಯಿಂದ ಸಾಕಷ್ಟು ಬಡ ಮಹಿಳಾ ಪ್ರಯಾಣಿಕರು ನಿರುದ್ಯೋಗಸ್ಥ ಮಹಿಳೆಯರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರ ಪ್ರಯಾಣಕ್ಕೆ ಸಹಕಾರಿಯಾಗಿದೆ. ಸಂಚಾರಕ್ಕಾಗಿ ಮಾಡುತ್ತಿದ್ದ ಖರ್ಚು ಉಳಿತಾಯವಾಗಿದೆ. ಗಾರ್ಮೆಂಟ್ಸ್ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳಿಗೆ ಹೋಗುವ ಮಹಿಳೆಯರಿಗೆ ವರದಾನವಾಗಿದ್ದು, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶಕ್ತಿ ಯೋಜನೆ ನೆರವಾಗುತ್ತಿದೆ. ಹಾಗಾಗಿ ಇನ್ನೂ ಹೆಚ್ಚಿನ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಪೃಥ್ವಿ ಜಯರಾಮ್ ತಿಳಿಸಿದರು.ಸಕಲೇಶಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸರ್ಕಾರದ ಬಹು ನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಅವುಗಳನ್ನು ಸಕರಾತ್ಮಕವಾಗಿ ಅನುಷ್ಠಾನಗೊಳಿಸಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ. ಈ 5 ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯನ್ನು ಮೊಟ್ಟ ಮೊದಲಿಗೆ ನಮ್ಮ ಸರ್ಕಾರ ಜಾರಿಗೊಳಿಸಿತು. ಈ ಮೂಲಕ ರಾಜ್ಯದ ಎಲ್ಲ ಮಹಿಳೆಯರು ವಿದ್ಯಾರ್ಥಿನಿಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನಮ್ಮ ಸರ್ಕಾರ ಒದಗಿಸಿದ್ದು, ಇಂದಿಗೆ ಈ ''''''''ಶಕ್ತಿ'''''''' ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿಯನ್ನು ದಾಟಿದೆ. ಹೀಗಾಗಿ ಇದೊಂದು ಸಂಭ್ರಮದ ಸಂಗತಿ ರಾಜ್ಯದ್ಯಂತ ಹಾಗೂ ನಮ್ಮ ದೇಶದಾದ್ಯಂತ ಒಂದು ಸರ್ಕಾರ ಹೆಣ್ಣುಮಕ್ಕಳಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕಲ್ಪಿಸಿರುವಂತಹ ಏಕೈಕ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ನಮ್ಮ ನಾಡಿನ ಹೆಣ್ಣು ಮಕ್ಕಳು ರಾಜ್ಯದ ಎಲ್ಲ ಸರ್ಕಾರಿ ಸ್ವಾಮ್ಯದ ಬಸ್ಸುಗಳಲ್ಲಿ ಉಚಿತವಾಗಿ 500 ಕೋಟಿ ಪ್ರಯಾಣಿಸಿರುವ ಹೆಗ್ಗಳಿಕೆಯನ್ನು ಸರಳ ಹಾಗೂ ಸಂಭ್ರಮದಿಂದ ಆಚರಿಸುತ್ತಿರುವುದು ನಮಗೆ ಸಂತಸದ ವಿಚಾರವೆಂದರು.
ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರ ಬೇಗಂ, ಹಾಸನ ಡಿಪೋ ಮ್ಯಾನೇಜರ್‌ಗಳಾದ ಪಾಂಡುರಂಗ, ರೇಣುಕಾ ಹಾಗೂ ಶಾಹಿನ್ ತಾಜ್, ಆಲೂರು ನಿಯಂತ್ರಣ ಅಧಿಕಾರಿ ನಂಜುಂಡೇಗೌಡ, ಆಲೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್, ಪೊಲೀಸ್ ಸಿಬ್ಬಂದಿ ಸಂಗಮ್ ಮತ್ತು ತಾಲೂಕು ಗ್ಯಾರಂಟಿ ಯೋಜನೆಗಳ ಸರ್ವಸದಸ್ಯರಾದ ರುದ್ರಕುಮಾರ್, ಹೇಮಂತ ಕುಮಾರ್, ಯೋಗೇಶ್, ಶ್ರೀಧರ್, ಶಿವಪ್ಪ, ಶಿವೇಗೌಡ ಮತ್ತು ಕಾಂಗ್ರೆಸ್ ಮುಖಂಡರುಗಳಾದ ಶಾಂತಕೃಷ್ಣ, ಅಜ್ಜೇನಹಳ್ಳಿ ಲೋಕೇಶ್, ರಂಗೇಗೌಡ, ಲೋಹಿತ್, ಟೀಕ್ ರಾಜು, ಸಂದೇಶ್, ಖಾಲಿದ್ ಪಾಷ, ಹರೀಶ್ ಹಾಗೂ ಆಲೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರು, ಮಹಿಳಾ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿದ್ದರು.