ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿ ೨೦೨೮ ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಗ್ರಾಮಗಳ ಪ್ರತಿ ಮನೆಗೆ ತೆರಳಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಮಾಜಿ ಶಾಸಕರು ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಎಚ್.ನಿಂಗಪ್ಪ ಹೇಳಿದರು. ಅವರು ಮಂಗಳವಾರ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮತದಾರಪಟ್ಟಿ ಪರಿಷ್ಕರಣೆ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ಮತ್ತು ಗಣ್ಯರಿಗೆ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದೇವೇಗೌಡರು ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ತುಮಕೂರಿಗೆ ೨೪ ಟಿಎಂಸಿ ಹೇಮಾವತಿ ನೀರು ಬರಲು ದೇವೇಗೌಡರ ಅವರೇ ಕಾರಣ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಆಗಿದ್ದು. ಶಿರಾ ಕ್ಷೇತ್ರದ ಮಾಜಿ ಸಚಿವರಾದ ಬಿ.ಸತ್ಯನಾರಾಯಣ ಅವರು ಪ್ರಾಮಾಣಿಕರು, ಸಜ್ಜನ ರಾಜಕಾರಣಿಗಳು.ತುಮಕೂರು ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸುಭದ್ರವಾಗಿದೆ . ಶಿರಾ ತಾಲೂಕಿನಲ್ಲೂ ಜೆಡಿಎಸ್ ಸುಭದ್ರವಾಗಿದೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜೆಡಿಎಸ್ ಪಕ್ಷ ಬಲ ವರ್ಧನೆಗೆ ಶಿರಾ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ತಾಲೂಕಿನ ಪ್ರತಿಯೊಂದು ಬೂತ್‌ಗಳಲ್ಲೂ ಪರಿಷ್ಕರಣೆ ನಡೆಯಲಿದ್ದು, ತಾಲೂಕಿನ ೨೭೪ ಬೂತ್‌ಗಳಿಗೂ ಒಬ್ಬೊಬ್ಬ ಪದಾಧಿಕಾರಿಗಳನ್ನು ನೇಮಿಸಿದ್ದೇವೆ. ನೇಮಕವಾಗಿರುವ ಎಲ್ಲಾ ಪದಾಧಿಕಾರಿಗಳು ಪ್ರತಿ ಬೂತ್‌ಗಳಲ್ಲೂ ಪಕ್ಷ ಸಂಘಟಿಸಿ ಎಂದರು. ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್ ಆರ್ ಗೌಡ ಮಾತನಾಡಿ, ಇಂದು ನೇಮಕವಾಗಿರುವ ಜೆಡಿಎಸ್ ಪಕ್ಷದ ಬಿಎಲ್‌ಒಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಮುಂಬರುವ ಎಲ್ಲ ಚುನಾವಣೆಗೂ ಜೆಡಿಎಸ್ ಪಕ್ಷಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಕಾರ್ಯಕರ್ತರು ತಳಮಟ್ಟದಲ್ಲಿ ಪಕ್ಷ ಸಂಘಟಿಸಬೇಕು. ಮುಂಬರುವ ನಗರಸಭೆ, ಜಿ.ಪಂ, ತಾ.ಪಂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಅನುಕೂಲವಾಗಲಿದೆ ಎಂದರು. ರಾಜ್ಯ ಜೆಡಿಎಸ್ ಪರಿಷತ್ ಮಾಜಿ ಸದಸ್ಯ ಆರ್ ಉಗ್ರೇಶ್ ,ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಆರ್.ಸಿ.ಅಂಜಿನಪ್ಪ. ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ದೇವರಾಜು, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾ ಜೆಡಿಎಸ್ ಎಸ್.ಟಿ. ಘಟಕದ ಅಧ್ಯಕ್ಷ ಹುಂಜನಾಳು ರಾಜಣ್ಣ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರೆಹಮತ್, ಮಹಿಳಾ ಘಟಕದ ಅಧ್ಯಕ್ಷ ಜಯಮ್ಮ, ಜೆಡಿಎಸ್ ವಕ್ತಾರ ಲಿಂಗದಹಳ್ಳಿ ಸುಧಾಕರ್, ಯುವ ಘಟಕದ ಜೆಡಿಎಸ್ ಅಧ್ಯಕ್ಷ ಪುನೀತ್ ಗೌಡ, ನಗರ ಜೆಡಿಎಸ್ ಅಧ್ಯಕ್ಷ ಶ್ರೀರಂಗ, ಮುಖಂಡರಾದ ಟಿ.ಡಿ.ನರಶಿಂಹಮೂರ್ತಿ, ಬೊಪ್ಪಣ್ಣ, ನಿಸರ್ಗ ಸುರೇಶ್, ಕೊಲ್ಲಾರಪ್ಪ, ಪುಟ್ಟಣ್ಣ, ಕೋಟೆ ಮಹದೇವರ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.