ಪುಸ್ತಕ, ದಿನಪತ್ರಿಕೆಗಳ ಅಧ್ಯಯದಲ್ಲಿ ತೊಡಗಿಸಿಕೊಳ್ಳಿ

| Published : Jul 18 2025, 12:45 AM IST

ಸಾರಾಂಶ

ಮಸ್ತಕವನ್ನು ಬೆಳಗುವ ಪುಸ್ತಕಗಳು ಮತ್ತು ದಿನಪತ್ರಿಕೆಗಳ ಅಧ್ಯಯನದಲ್ಲಿ ಯುವ ಸಮೂಹ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.

ಶಿವಮೊಗ್ಗ: ಮಸ್ತಕವನ್ನು ಬೆಳಗುವ ಪುಸ್ತಕಗಳು ಮತ್ತು ದಿನಪತ್ರಿಕೆಗಳ ಅಧ್ಯಯನದಲ್ಲಿ ಯುವ ಸಮೂಹ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.ನಗರದ ಎಚ್‌.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ವತಿಯಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘ, ಕ್ರೀಡಾ ವೇದಿಕೆ, ಭಾರತ ಸೇವಾದಳ, ಎನ್‌ಎಸ್‌ಎಸ್ ಘಟಕ, ರೋವರ್ ರೇಂಜರ್ಸ್, ರೆಡ್ ಕ್ರಾಸ್ ಕ್ಲಬ್‌ಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಞಾನದ ನಿರಂತರ ಜ್ಯೋತಿ ಮನಗಳಲ್ಲಿ ಬೆಳಗಲಿ. ತಾನು ಕಲಿಯದ ಶಿಕ್ಷಕ, ಇನ್ನೊಬ್ಬರನ್ನು ಎಂದಿಗೂ ಕಲಿಸಲಾರ. ನಿರಂತರ ಅಧ್ಯಯನ ಎಲ್ಲಾ ಕ್ಷೇತ್ರಗಳಲ್ಲಿ ಅವಶ್ಯಕ. ಪುಸ್ತಕಗಳು ನಮ್ಮ ಮಸ್ತಕವನ್ನು ಬೆಳಗುತ್ತದೆ‌. ದಿನಪತ್ರಿಕೆಗಳು ಹಾಗೂ ಪುಸ್ತಕಗಳು ಬದುಕಿನ ಯಶಸ್ಸಿಗೆ ರಹದಾರಿ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ, ವಿವಿಧ ವಿದ್ಯಾರ್ಥಿ ವೇದಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೌಶಲ್ಯತೆಯುಳ್ಳ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.

ಅರ್ಹತೆಯಿಂದ ಒಳ್ಳೆಯ ಅವಕಾಶ, ಯೋಗ್ಯತೆಯಿಂದ ಮರ್ಯಾದೆ ಸಿಗುತ್ತದೆ‌. ಅಂತಹ ಅರ್ಹತೆ ಮತ್ತು ಯೋಗ್ಯತೆ ನಿಮ್ಮದಾಗಲಿ. ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಸ್ತು ಅಮ್ಮನ ಮಡಿಲು ಮತ್ತು ಅಪ್ಪನ ಹೆಗಲು‌. ತಂದೆ, ತಾಯಿ ಹಿರಿಯರ ಆಶಯಗಳನ್ನು ಗೌರವಿಸಿ. ಅಪ್ಪ ಅಮ್ಮ ಇಲ್ಲದವರು ಅನಾಥರಲ್ಲ, ಅವರ ನಿಜವಾದ ಬೆಲೆ ಗೊತ್ತಿಲ್ಲದವರು ಅನಾಥರು‌ ಎಂದರು.

ಆಧುನಿಕತೆಯ ಭರದಲ್ಲಿ ಜೀವನ ಮೌಲ್ಯ ಕಳೆದುಕೊಂಡಿದ್ದೇವೆ. ಅಜ್ಜಿಯ ಮನೆಯ ಸಂಭ್ರಮವನ್ನು ಪಡೆಯದೆ, ಕೇವಲ ಬೇಸಿಗೆ ಶಿಬಿರಕ್ಕೆ ಸೀಮಿತವಾಗಿದ್ದೇವೆ. ಬಾಹ್ಯ ಸೌಂದರ್ಯಕ್ಕಿಂತ ನಾವು ಮಾಡುವ ಕೆಲಸ ಮತ್ತು ವ್ಯಕ್ತಿತ್ವದ ಮೂಲಕ ಆಂತರ್ಯ ಸೌಂದರ್ಯವಂತರಾಗಿ‌ ಎಂದು ಹೇಳಿದರು.

ಅದೃಷ್ಟದಿಂದ ಬಂದಿದ್ದು ಅಹಂಕಾರ ನೀಡಿದರೆ, ಕಷ್ಟಪಟ್ಟು ಸಂಪಾದಿಸಿದ್ದು ಆತ್ಮ ತೃಪ್ತಿ ನೀಡುತ್ತದೆ. ಪ್ರತಿಭೆ ಮತ್ತು ರೂಪ ದೇವರ ಕೊಡುಗೆ, ಕೀರ್ತಿ ಮನುಷ್ಯನ ಸೃಷ್ಟಿ, ಅದರೆ ವ್ಯಕ್ತಿತ್ವ ಮತ್ತು ಅಹಂಕಾರ ನಮ್ಮ ಸೃಷ್ಟಿ‌. ಏನು ಹೇಳುತ್ತೇವೆ ಎನ್ನುವುದು ಮುಖ್ಯವಲ್ಲ, ಹೇಗೆ ಹೇಳುತ್ತೇವೆ ಎಂಬುದು ಮುಖ್ಯ. ದೃಷ್ಟಿ ಚೆನ್ನಾಗಿದ್ದರೆ ಸೃಷ್ಟಿ ಚೆನ್ನಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜಮುಖಿ ದೃಷ್ಟಿಕೋನ ನಿಮ್ಮದಾಗಲಿ ಎಂದು ಆಶಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ ಮಾತನಾಡಿ, ಒಳ್ಳೆಯ ಕೇಳುಗರು ಉತ್ತಮ ವ್ಯಕ್ತಿತ್ವಗಳಾಗಿ ಬದಲಾಗುತ್ತಾರೆ. ಇಂದಿನ ಯುವ ಸಮೂಹ ಕೇಳುವ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಣದ ಅಪವ್ಯಯಕ್ಕಿಂತ ಸಮಯದ ಅಪವ್ಯಯ ತುಂಬಾ ಕೆಟ್ಟದ್ದು. ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯವನ್ನು ಕೌಶಲ್ಯ ಪೂರ್ಣವಾಗಿ ಬಳಸಿಕೊಳ್ಳಿ. ಗುರಿಯನ್ನು ತಲುಪುವತ್ತ ಪ್ರಾಮಾಣಿಕ ಪ್ರಯತ್ನ ನಡೆಯಲಿ ಎಂದು ತಿಳಿಸಿದರು.

ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 572 ಅಂಕ ಪಡೆದ ವಿದ್ಯಾರ್ಥಿ ಸಮರ್ಥ.ಈ.ಜಿ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಕೆ.ಅಂಜನಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ.ಬಿ.ಪಿ, ಎನ್ಇಎಸ್ ನಿರ್ದೇಶಕ ಎಚ್.ಸಿ.ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.