ಸಾರಾಂಶ
ಹಾವೇರಿ: ತಾಲೂಕಿನ ಕಂಚಾರಗಟ್ಟಿ ಗ್ರಾಮದ ಹನುಮಂತ ಬಸವರಾಜಪ್ಪ ಯಲಿಗಾರ(31) ಬೆಂಗಳೂರಿನಲ್ಲಿ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಹನುಮಂತ ಮಂಗಳವಾರ ಬೆಳಗ್ಗೆ ಎದೆನೋವಿನಿಂದ ಬಳಲಿ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಹನುಮಂತ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಹೃದಯಾಘಾತದಿಂದ ಲಾರಿ ಚಾಲಕ ಸಾವು
ಬ್ಯಾಡಗಿ: ಹೆದ್ದಾರಿಯಲ್ಲಿ ಲಾರಿ ಚಲಾಯಿಸುತ್ತಿದ್ದಾಗಲೇ ಎದೆನೋವಿನಿಂದ ಬಳಲಿ ಹೃದಯಾಘಾತಕ್ಕೀಡಾದ ಲಾರಿ ಚಾಲಕರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ಘಟನೆ ಮಂಗಳವಾರ ನಡೆದಿದೆ.ಮೃತ ಚಾಲಕನನ್ನು ಬಾಬುರಾವ ಖಮ್ಮಟ್ (50) ಎಂದು ಗುರುತಿಸಲಾಗಿದ್ದು, ಮೂಲತಃ ಇವರು ಮಹಾರಾಷ್ಟ್ರದ ಉಮ್ರಾವತಿ ಗ್ರಾಮದ ನಿವಾಸಿ.
ಲಾರಿ ಚಲಾಯಿಸಿಕೊಂಡು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ತಾಲೂಕಿನ ಮೊಟೇಬೆನ್ನೂರು ಗ್ರಾಮದ ಬಳಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾಗಿ ತಿಳಿದುಬಂದಿದೆ.
ಬಿಲ್ಲಳ್ಳಿ ಗ್ರಾಮದ ಯುವಕ ನಾಪತ್ತೆ
ರಾಣಿಬೆನ್ನೂರು: ತಾಲೂಕಿನ ಬಿಲ್ಲಳ್ಳಿ ಗ್ರಾಮದ ಯುವಕ ಕಾಣೆಯಾಗಿದ್ದಾನೆ. ನಾಗರಾಜ ಪರಮೇಶಪ್ಪ ಬಿದರಿ (30) ಕಾಣೆಯಾದ ಯುವಕ.ಈತ 5.3 ಅಡಿ ಎತ್ತರ, ಸದೃಢ ಮೈಕಟ್ಟು, ಗೋದಿ ಮೈಬಣ್ಣ, ಕಪ್ಪು ತಲೆಗೂದಲು ಹೊಂದಿದ್ದಾನೆ. ಎಡಗಾಲಿನ ಹಿಮ್ಮಡಿಯ ಮೇಲೆ 2 ಇಂಚು ಉದ್ದದ ಸುಟ್ಟ ಗಾಯದ ಗುರುತು ಇದೆ.ಕನ್ನಡ ಮಾತನಾಡುತ್ತಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಓದಲು, ಬರೆಯಲು ಬರುತ್ತದೆ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಆರಕ್ಷಕ ಉಪ ನಿರೀಕ್ಷಕರು, ಹಲಗೇರಿ ಪೊಲೀಸ್ ಠಾಣೆ 08373- 252333, ಮೊ. 9480804554, ಆರಕ್ಷಕ ವೃತ್ತ ನಿರೀಕ್ಷಕರು, ಕುಮಾರಪಟ್ಟಣ ವೃತ್ತ ದೂ. 08373- 266404, ಮೊ. 9480804536, ಆರಕ್ಷಕ ಉಪ ಅಧೀಕ್ಷಕರು ಉಪ ವಿಭಾಗ, ರಾಣಿಬೆನ್ನೂರು ದೂ. 08373-266311, ಮೊ. 9480804521 ಸಂಪರ್ಕಿಸಲು ಕೋರಲಾಗಿದೆ.