ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲಸ ಮಾಡುವಾಗ ಎಂಜಿನಿಯರ್‌ಗಳು ತಮ್ಮ ತಲೆಯನ್ನು ಅಪ್ಲೈ ಮಾಡುವುದಿಲ್ಲ. ಅವರಿಗೆ ಎಷ್ಟರ ಮಟ್ಟಿಗೆ ಬ್ರೈನ್ ಡೆಡ್ ಆಗಿದೆ ಎಂದರೆ, ಸಾವಿರ ಸಲ ಹೇಳಿದರೂ ಕೇಳುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕಾರಿನಲ್ಲಿ ಕಚೇರಿಗೆ ತೆರಳುವಾಗ ಜಿಬಿಎ ವಿಶೇಷ ಆಯುಕ್ತರು, ಮುಖ್ಯ ಆಯುಕ್ತರು, ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಸಹಾಯಕ ಎಂಜಿನಿಯರ್‌ಗಳೊಂದಿಗೆ ಮೊಬೈಲ್‌ನಲ್ಲಿ ಸಚಿವರು ಆನ್‌ಲೈನ್‌ ಸಭೆ ನಡೆಸಿದರು.

ಗುಂಡಿ ಮುಚ್ಚುವಾಗ ಸರಿಯಾಗಿ ಫೌಂಡೇಶನ್ ಹಾಕದೆಯೇ ಟಾರು ಹಾಕಿದರೆ ಅದು ಹೇಗೆ ಸಧೃಡವಾಗಿರಲು ಸಾಧ್ಯ? ಈ ಕುರಿತು ಪ್ರಶ್ನಿಸಿದರೆ ಎಂಜಿನಿಯರ್‌ಗಳು ನಮಗೆ ಥಿಯರಿ ಲೆಕ್ಚರ್ ನೀಡುತ್ತಾರೆ. ಆದರೆ, ಆ ಥಿಯರಿಗೂ, ಪ್ರ್ಯಾಕ್ಟಿಕಲ್ ಕೆಲಸಕ್ಕೂ ಸಂಬಂಧವಿರುವುದಿಲ್ಲ. ಯಾವುದೇ ರಸ್ತೆಯಲ್ಲಿ ಡಾಂಬರೀಕರಣ ಕೈಗೆತ್ತಿಕೊಳ್ಳುವಾಗ ಗುಂಡಿಗಳಿದ್ದರೆ ಮೊದಲು ಗುಂಡಿ ಮುಚ್ಚಿ, ನಂತರ ಡಾಂಬರೀಕರಣ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.

ಇನ್ನು ಸಣ್ಣ ರಸ್ತೆಗಳಿಗೂ ಸೈಡ್ ಮಾರ್ಕಿಂಗ್ ಮಾಡುತ್ತಾರೆ. ಆದರೆ, ಸೆಂಟರ್ ಲೈನ್ ಮಾರ್ಕಿಂಗ್ ಮಾಡುವುದಿಲ್ಲವೇಕೆ? ಗಾಡಿಗಳು ಹೇಗೆ ಬೇಕಾದರೂ ಟರ್ನ್ ತೆಗೆದುಕೊಳ್ಳಬಹುದೇ? ಇಂಡಿಯನ್ ರೋಡ್ ಕಾಂಗ್ರೆಸ್‌ ನಿಯಮಗಳು ಏನು ಹೇಳುತ್ತವೆ? ಎಂದು ಪರಿಶೀಲಿಸಬೇಕು. ರಸ್ತೆಯಲ್ಲಿ ಎಡಕ್ಕೆ ಮತ್ತು ಬಲಕ್ಕೆ ತಿರುವು ತೆಗೆದುಕೊಳ್ಳಲು ಸೂಚಿಸುವ ಮಾರ್ಕಿಂಗ್ ಹಾಕಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.


ಸೆಂಟರ್ ಲೈನ್ ಮಾರ್ಕಿಂಗ್ ಮಾಡಬೇಕು ಎಂದು ಎಂಜಿನಿಯರ್‌ಗಳಿಗೆ ಸಾವಿರ ಸಲ ಹೇಳಿದ್ದೇನೆ. ಆದರೂ, ಕೆಲಸ ಮಾಡುವಾಗ ಎಂಜಿನಿಯರ್‌ಗಳು ತಲೆ ಅಪ್ಲೈ ಮಾಡುವುದಿಲ್ಲ. ಎಷ್ಟು ಬ್ರೈನ್ ಡೆಡ್ ಆಗಿದೆ ಎಂದರೆ, ಎಷ್ಟು ಸಲ ಹೇಳಿದರೂ ಕೇಳುವುದಿಲ್ಲ. ನನ್ನ ಕ್ಷೇತ್ರದಲ್ಲಿ ಈ ರೀತಿ ಸಮಸ್ಯೆಯಾಗಿದೆ. ರಸ್ತೆಯ ಅಗಲ 4 ಮೀಟರ್‌ಗಿಂತ ಕಡಿಮೆ ಇದ್ದರೂ ಸೆಂಟರ್ ಲೈನ್ ಮಾರ್ಕಿಂಗ್ ಮಾಡಲೇಬೇಕು. ಸಣ್ಣ ರಸ್ತೆಗಳಿಗೆ ಸೈಡ್ ಮಾರ್ಕಿಂಗ್ ಅಗತ್ಯವಿಲ್ಲ ಎಂದು ಸಚಿವರು ಸೂಚಿಸಿದರು.

ಪದೇ ಪದೇ ನೀರು ನಿಲ್ಲುವ ರಸ್ತೆಗಳು, ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ರಸ್ತೆ ಬದಿಯ ಡ್ರೈನೇಜ್‌ಗಳಿಗೆ ಮಳೆ ನೀರು ಹರಿದು ಹೋಗುವ ಕಡೆ ಕಟ್ಟಡ ನಿರ್ಮಾಣ ತ್ಯಾಜ್ಯ, ಮತ್ತಿತರ ತ್ಯಾಜ್ಯ ಬಿದ್ದು ಅಡ್ಡಿಯಾಗಿರುತ್ತವೆ. ಅದನ್ನು ತೆರವುಗೊಳಿಸಬೇಕು. ವಿಶೇಷವಾಗಿ ಎಂಜಿನಿಯರ್‌ಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.