ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಒಟ್ಟು 10 ವಿದ್ಯಾರ್ಥಿಗಳಿಗೆ ಇಂಗ್ಲೆಂಡ್, ಅಮೆರಿಕ ಪ್ರವಾಸ ಭಾಗ್ಯ ಲಭಿಸಿದೆ. ಇದರೊಂದಿಗೆ ವಸತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ ಮಾಡುವ ಅವಕಾಶ ಒಲಿದು ಬಂದಿದೆ.
ವಿದೇಶ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಬಹುತೇಕ ಎಲ್ಲರೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲೇ ಪಿಯುಸಿ ಮಾಡುತ್ತಿದ್ದಾರೆ. ಈ ಅಂಕಗಳ ಆಧಾರದಲ್ಲಿ ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.ಹುಕ್ಕೇರಿ ತಾಲೂಕಿನ ನಿಡಸೋಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸವಿತಾ ಠಪಾಲ, ರಾಯಬಾಗ ತಾಲೂಕಿನ ಸುಟ್ಟಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಮೀತಾ ಧುಮಾಳೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂವರು, ಹಾವೇರಿ ಜಿಲ್ಲೆಯಿಂದ ಇಬ್ಬರು, ಗದಗ-ಉಡುಪಿ-ಕೋಲಾರ ಜಿಲ್ಲೆಯಿಂದ ತಲಾ ಒಬ್ಬರು ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ.
ವಿದ್ಯಾರ್ಥಿಗಳ ಆಯ್ಕೆ, ಪಾಸ್‌ಪೋರ್ಟ್, ವೀಸಾ, ಪ್ರಯಾಣ, ವಸತಿ ಸಹಿತ ಸಂಪೂರ್ಣ ಖರ್ಚು ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯು ಕ್ರೈಸ್‌ನ ಮೂಲಕ ಭರಿಸಲಿದೆ. ಪ್ರಯಾಣ ಪೂರ್ವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪೂರ್ಣ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಅಧಿಕೃತ ಆದೇಶ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರವಾಸಕ್ಕೆ ತೆರಳಲಿರುವ 10 ವಿದ್ಯಾರ್ಥಿಗಳಲ್ಲಿ ಐವರು ವಿದ್ಯಾರ್ಥಿಗಳು ಮತ್ತು ಐವರು ವಿದ್ಯಾರ್ಥಿನಿಯರು ಇದ್ದಾರೆ. ಐವರು ವಿದ್ಯಾರ್ಥಿಗಳಲ್ಲೂ ಇಬ್ಬರು ಪರಿಶಿಷ್ಟ ಜಾತಿ, ಇಬ್ಬರು ಹಿಂದುಳಿದ ವರ್ಗ ಮತ್ತು ಒಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ. ಇದು ಒಟ್ಟು 15 ದಿನಗಳ ಪ್ರವಾಸವಾಗಿದೆ. ಪ್ರಮುಖ ಸ್ಥಳಗಳ ಸಂದರ್ಶನ, ಮಾನವ ಸರಪಳಿಯ ವಿಶ್ವದಾಖಲೆಯ ಕಾರ್ಯಕ್ರಮ ವೀಕ್ಷಣೆ ಇರಲಿದೆ. ಕೆಲವು ಅಧಿಕಾರಿಗಳು ಜತೆಗಿರಲಿದ್ದಾರೆ.
ಇನ್ನು ಆರನೇ ತರಗತಿಯಿಂದಲೇ ಕ್ರೈಸ್‌ನ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರಬೇಕು. ಅಷ್ಟೇ ಅಲ್ಲದೇ ಕ್ರೈಸ್‌ನ ವಸತಿ ಶಾಲೆಯಲ್ಲಿಯೇ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವವರನ್ನು ವಿದೇಶ ಪ್ರಯಾಣಕ್ಕೆ ಆಯ್ಕೆ ಮಾಡುವ ಮಾನದಂಡ ಅನುಸರಿಸಲಾಗಿದೆ.ಪಾಸ್‌ಪೋರ್ಟ್ ಸಮಸ್ಯೆ:ಮೊದಲ ಪಟ್ಟಿ ಪ್ರಕಾರ ಜ.7ರಂದು ಪ್ರಯಾಣ ಹೊರಡಬೇಕಿತ್ತು. ಅಷ್ಟರೊಳಗೆ ಪಾಸ್‌ಪೋರ್ಟ್, ವೀಸಾ ಆಗದಿರುವುದರಿಂದ ಪ್ರಯಾಣ ವಿಳಂಬವಾಗುತ್ತಿದೆ. ಪಾಸ್‌ಪೋರ್ಟ್ ಪ್ರಕ್ರಿಯೆ ಮಾಡಿಸುವ ಜವಾಬ್ದಾರಿಯನ್ನು ಎಂಎಸ್‌ಐಎಲ್ ಸಂಸ್ಥೆಗೆ ನೀಡಲಾಗಿದೆ. ಹೆಚ್ಚಿನ ಮಕ್ಕಳ ಪೋಷಕರು ಉತ್ತರ ಕರ್ನಾಟಕದವರಾಗಿದ್ದಾರೆ. ಕೆಲವರು ಅನಕ್ಷರಸ್ಥರು, ವಿದ್ಯಾರ್ಥಿಗಳು ಅಪ್ರಾಪ್ತರಾದ ಕಾರಣ ಮೊದಲು ಹೆತ್ತವರ ಜನನ ಪ್ರಮಾಣ ಪತ್ರ ಇಲ್ಲ. ಆಧಾರ್ ಮತ್ತು ಇತರ ದಾಖಲೆಗಳಲ್ಲಿ ಹೆಸರು, ದಿನಾಂಕ ವ್ಯತ್ಯಾಸವಿದೆ. ಹೆತ್ತವರ ಪಾಸ್‌ಪೋರ್ಟ್ ಆಗದ ಹಿನ್ನೆಲೆಯಲ್ಲಿ ಮಕ್ಕಳದ್ದೂ ಆಗದೆ, ಪ್ರಯಾಣ ವಿಳಂಬವಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಿದೇಶ ಪ್ರವಾಸಕ್ಕೆ ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿದೇಶ ಪ್ರವಾಸಕ್ಕೆ ಕಳುಹಿಸಿಕೊಡಲು ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ.- ರಾಮನಗೌಡ ಕನ್ನೋಳಿ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ