ಬಳ್ಳಾರಿಯಲ್ಲೂ ಇಂಗ್ಲಿಷ್ ಫಲಕಗಳ ಹಾವಳಿ!

| Published : Dec 30 2023, 01:15 AM IST

ಸಾರಾಂಶ

ರಾಜಕೀಯ ನಾಯಕರಂತೆ ಅಧಿಕಾರಿಗಳು ಸಹ "ಕ್ರಮ ವಹಿಸಲಾಗುವುದು " ಎಂಬ ಒಂದು ಸಾಲಿನ ಭರವಸೆ ನೀಡಿ ಕೈತೊಳೆದುಕೊಳ್ಳುದ್ದರಿಂದ ಕನ್ನಡ ನಾಮಫಲಕ ಕಡ್ಡಾಯದ ಕನ್ನಡಿಗರ ಒತ್ತಾಸೆ ಕೈಗೊಡಿಲ್ಲ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಹೋಟೆಲ್, ಅಂಗಡಿಗಳು, ಆಸ್ಪತ್ರೆ ಸೇರಿದಂತೆ ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಇರಬೇಕು ಎಂಬ ನಿಯಮ ಗಣಿ ನಗರಿ ಬಳ್ಳಾರಿಯಲ್ಲೂ ಪಾಲನೆಯಾಗಿಲ್ಲ.

ಈ ಸಂಬಂಧ ಕನ್ನಡಪರ ಸಂಘಟನೆಗಳು ಈ ಹಿಂದೆ ಅನೇಕ ಹೋರಾಟಗಳನ್ನು ಕೈಗೊಂಡರೂ ಯಾವುದೇ ಪ್ರಯೊಜನವಾಗಿಲ್ಲ. ರಾಜಕೀಯ ನಾಯಕರಂತೆ ಅಧಿಕಾರಿಗಳು ಸಹ "ಕ್ರಮ ವಹಿಸಲಾಗುವುದು " ಎಂಬ ಒಂದು ಸಾಲಿನ ಭರವಸೆ ನೀಡಿ ಕೈತೊಳೆದುಕೊಳ್ಳುದ್ದರಿಂದ ಕನ್ನಡ ನಾಮಫಲಕ ಕಡ್ಡಾಯದ ಕನ್ನಡಿಗರ ಒತ್ತಾಸೆ ಕೈಗೊಡಿಲ್ಲ.

ಮನವಿ ಸಲ್ಲಿಕೆಗೆ ಸೀಮಿತ: ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬಳ್ಳಾರಿಯಲ್ಲಿ ಕನ್ನಡದ ಬಗ್ಗೆ ಅಧಿಕಾರಿಗಳು ಈ ಹಿಂದಿನಿಂದಲೂ ತಾತ್ಸಾರ ಮನೋಭಾವ ಹೊಂದಿರುವುದು ಕಂಡುಬಂದಿದೆ. ಈ ಹಿಂದಿನ ಎಲ್ಲ ಜಿಲ್ಲಾಧಿಕಾರಿಗಳು ನಾಮಫಲಕಗಳಲ್ಲಿ ಕನ್ನಡ ಬಳಕೆಯ ವಿಚಾರವನ್ನು ಎಂದೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕನ್ನಡ ಸಂಘಟನೆಗಳ ಹೋರಾಟಗಳು ಮನವಿಪತ್ರ ಸಲ್ಲಿಕೆಗೆ ಸೀಮಿತಗೊಂಡಂತಾಗಿದೆ. ಇನ್ನು ನಗರದ ರಾಜಕೀಯ ನಾಯಕರು ಕನ್ನಡ ಬಳಕೆಯ ವಿಚಾರವನ್ನು ಎಂದೂ ಗಂಭೀರವಾಗಿ ಪರಿಗಣಿಸಿದರವರಲ್ಲ. ಇದು ಕನ್ನಡ ನಾಮಫಲಕ ಅನುಷ್ಠಾನಕ್ಕೆ ಕೊಕ್ಕೆ ಬಿದ್ದಂತಾಗಿದೆ. ಈ ಕುರಿತು ಅನೇಕ ಕನ್ನಡಪರ ಸಂಘಟನೆಗಳು ಆಗಾಗ್ಗೆ ಧ್ವನಿ ಎತ್ತುತ್ತಲೇ ಬಂದಿವೆ. ಆದರೆ, ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಹಾಗೆ ನೋಡಿದರೆ, ಗಡಿನಾಡು ಬಳ್ಳಾರಿಯಲ್ಲಿ ಭಾಷಾ ಅನುಷ್ಠಾನ ವಿಚಾರದಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕಿತ್ತು. ಆದರೆ, ಸಂಘಟನೆಗಳ ಮುಖಂಡರ ಮನವಿ ಸ್ವೀಕೃತಿಗೆ ಮಾತ್ರ ಈವರೆಗೆ ಕನ್ನಡಭಾಷಾಭಿಮಾನದ ಕಾಳಜಿ ಅಧಿಕಾರಿಗಳಿಂದ ಕಂಡುಬಂದಿದೆ. ಇದು ಇಂಗ್ಲಿಷ್ ಫಲಕಗಳು ನಗರದಲ್ಲಿ ರಾರಾಜಿಸಲು ಪ್ರಮುಖ ಕಾರಣವೂ ಆಗಿದೆ.

ಸರ್ಕಾರದ ಗಡುವು; ಅನುಷ್ಠಾನ ಶಂಕೆ:

ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲು ಮುಂದಾಗಿದೆಯಲ್ಲದೆ, ಫಲಕಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸದಂತೆ ಫೆ. 28ರ ಗಡುವು ವಿಧಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿಲುವನ್ನು ಇಲ್ಲಿನ ಅಧಿಕಾರಿಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸುತ್ತಾರೆ ಎಂಬ ಗುಮಾನಿಯೂ ಇದೆ.

ಏತನ್ಮಧ್ಯೆ ಕನ್ನಡಪರ ಸಂಘಟನೆಗಳು ಈ ವಿಚಾರದಲ್ಲಿ ಜಿಲ್ಲಾಡಳಿತ ಮೇಲೆ ಒತ್ತಡ ತಂದು, ಕನ್ನಡ ನಾಮಫಲಕಗಳ ಅಳವಡಿಕೆಗೆ ಎಷ್ಟರ ಮಟ್ಟಿಗೆ ಪಾತ್ರ ವಹಿಸುತ್ತಾರೆ ಎಂಬುದನ್ನು ಸಹ ಕಾದು ನೋಡಬೇಕಿದೆ. ಕನ್ನಡ ಬಳಕೆಯೂ ಕಡ್ಡಾಯವಾಗಲಿ...

ಗಡಿನಾಡು ಬಳ್ಳಾರಿಯಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸುವುದರ ಜತೆಗೆ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಚಿಂತಕರು ಆಗ್ರಹಿಸಿದ್ದಾರೆ.

ಕೆಲವು ಕಚೇರಿಗಳಲ್ಲಿನ ಸಿಬ್ಬಂದಿ ಶೋಕಿಗಾಗಿ ಅನ್ಯಭಾಷೆಯಲ್ಲಿಯೇ ವ್ಯವಹರಿಸುವುದು ಕಂಡುಬರುತ್ತದೆ. ಇತ್ತೀಚೆಗೆ ಅನ್ಯಭಾಷೆ ಬಳಕೆ ಮಾಡುವ ಶೋಕಿಲಾಲರ ಸಂಖ್ಯೆಯೂ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರಿ ಇಲಾಖೆ ಸಿಬ್ಬಂದಿ ಕನ್ನಡವಲ್ಲದೆ ಬೇರೆ ಭಾಷೆ ಬಳಕೆ ಮಾಡಿದರೆ ಕ್ರಮ ಜರುಗಿಸುವ ಕೆಲಸವೂ ಆಗಬೇಕಿದೆ ಎಂದಿದ್ದಾರೆ. ಅಧಿಕಾರಿಗಳೇ ನೇರ ಹೊಣೆ: ಬಳ್ಳಾರಿಯಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲ ವಾಣಿಜ್ಯ ಕಚೇರಿಗಳು, ಕಟ್ಟಡಗಳ ನಾಮಫಲಕಗಳು ಕನ್ನಡದಲ್ಲಿರಬೇಕು ಎಂದು ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಇದನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕನ್ನಡದ ಬಗೆಗಿನ ವಿರೋಧಿ ಧೋರಣೆಯಿಂದಾಗಿ ಕನ್ನಡದ ನೆಲದಲ್ಲಿ ಇಂಗ್ಲಿಷ್ ಫಲಕಗಳು ರಾರಾಜಿಸುತ್ತಿವೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರರಾದ ಕೆ. ಎರಿಸ್ವಾಮಿ, ಸಿದ್ಮಲ್ ಮಂಜುನಾಥ್, ಚಂದ್ರಶೇಖರ ಆಚಾರ್ ಕಪ್ಪಗಲ್.

ಅಗತ್ಯ ಕ್ರಮ: ಕನ್ನಡ ನಾಮಫಲಕಗಳ ಬಗ್ಗೆ ಸರ್ಕಾರದಿಂದ ಬರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ನಾಮಫಲಕ ಅಳವಡಿಕೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಕುರಿತು ಪತ್ರಿಕೆಯಲ್ಲಿ ಓದಿರುವೆ. ಇನ್ನು ನಮಗೆ ಸೂಚನೆ ಬಂದಿಲ್ಲ. ಬರುತ್ತಿದ್ದಂತೆಯೇ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಲಿದೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.