ಮಂಜುನಾಥ ಕೆ.ಎಂ.
ಬಳ್ಳಾರಿ: ಗಣಿಬಾಧಿತ ಪ್ರದೇಶಗಳಾದ ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಪೂರ್ವ ವಲಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಪದ್ಧತಿಯ ಮೂಲಕ ಇಂಗ್ಲೀಷ್ ಬೋಧನೆ ಆರಂಭವಾಗಿದೆ.ಸರ್ಕಾರದ ಮಹತ್ವಾಕಾಂಕ್ಷಿ ಶಿಕ್ಷಣ ಯೋಜನೆಯ ಭಾಗವಾಗಿ ಒಂದರಿಂದ ಐದನೇ ತರಗತಿವರೆಗೆ ಕನ್ನಡದ ಜತೆಗೆ ಇಂಗ್ಲೀಷ್ ಮಾಧ್ಯಮದ ಕಲಿಕೆಗೆ ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಂಡಿದೆ. ಬಳ್ಳಾರಿ ತಾಲೂಕಿನ ಪೂರ್ವ ವಲಯದ 143 ಕಿರಿಯ, ಹಿರಿಯ, ಪ್ರೌಢಶಾಲೆಗಳು ಹಾಗೂ ಸಂಡೂರು ತಾಲೂಕಿನ 153 ಶಾಲೆಗಳು ದ್ವಿಭಾಷಾ ಶಿಕ್ಷಣ ಪದ್ಧತಿ ಯೋಜನೆಗೆ ಒಳಗಾಗಿವೆ. ಈ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಗುಣಮಟ್ಟದ ಇಂಗ್ಲೀಷ್ ಬೋಧನೆ ಜತೆ ಸರ್ಕಾರದ ಎಲ್ಲ ಶೈಕ್ಷಣಿಕ ಉಚಿತ ಯೋಜನೆಗಳು ಅನ್ವಯವಾಗಲಿವೆ.
ವಿದ್ಯಾರ್ಥಿಗಳನ್ನು ಸೆಳೆಯಲು ಯತ್ನ:ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ದಾಖಲಾತಿ ಹೆಚ್ಚಿಸುವ ಪ್ರಯತ್ನ ನಡೆದಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ದ್ವಿಭಾಷಾ ಶಿಕ್ಷಣ ವ್ಯವಸ್ಥೆಗೆ ಚಾಲನೆ ನೀಡಿರುವುದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಶಾವಾದ ಮೂಡಿಸಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದ ಪೋಷಕರನ್ನು ಮತ್ತೆ ಸರ್ಕಾರಿ ಶಾಲೆಗಳತ್ತ ಸೆಳೆಯುವ ಪ್ರಯತ್ನಕ್ಕೂ ಇದು ಪೂರಕವಾಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇಂಗ್ಲೀಷ್ ಬೋಧನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಬೇಸಿಗೆ ರಜೆ ಅವಧಿಯಲ್ಲಿಯೇ ಆಯ್ದ ಶಿಕ್ಷಕರಿಗೆ ಭಾಷಾ ಕೌಶಲ್ಯ, ಬೋಧನಾ ವಿಧಾನ ಹಾಗೂ ಮಕ್ಕಳಿಗೆ ಸುಲಭವಾಗಿ ಇಂಗ್ಲೀಷ್ ಕಲಿಸುವ ತಂತ್ರಗಳ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು. ಇದೀಗ ಆನ್‌ಲೈನ್ ಮೂಲಕ 40 ದಿನಗಳ ತರಬೇತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದರಿಂದ ತರಗತಿ ಕೊಠಡಿಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಲಿದೆ ಎಂಬ ನಿರೀಕ್ಷೆ ಮೂಡಿದೆ.
ಸೌಕರ್ಯ, ಶಿಕ್ಷಕರ ನಿಯೋಜನೆ:
ಶಿಕ್ಷಣ ಇಲಾಖೆ ದ್ವಿಭಾಷಾ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಈಗಾಗಲೇ ಪೂರ್ಣಗೊಳಿಸಿದೆ. ಪ್ರತಿ ತರಗತಿಗೆ ಶಿಕ್ಷಕರನ್ನು ನಿಯೋಜಿಸುವ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಲು ಇಲಾಖೆ ಸಜ್ಜಾಗಿದೆ.ಇದರ ಜತೆಗೆ ಬಳ್ಳಾರಿ ಪಶ್ಚಿಮ ವಲಯ, ಸಿರುಗುಪ್ಪ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಎಂಶ್ರೀ, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿಯೂ ದ್ವಿಭಾಷಾ ಶಿಕ್ಷಣವೂ ಈ ಬಾರಿ ಜಾರಿಗೊಂಡಿದೆ. ಈ ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇಂಗ್ಲೀಷ್ ಕಲಿಕೆಯ ವಿಸ್ತರಣೆಗೆ ಪೂರಕ ನೆಲೆಯಾಗಿ ಪರಿಣಮಿಸಿವೆ.