ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನೆ ಹೊರತುಪಡಿಸಿ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗುತ್ತಿದ್ದು, ಇದರಿಂದ ತರಗತಿಯಲ್ಲಿ ಸಂಪೂರ್ಣವಾಗಿ ಬೋಧನೆಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರನ್ನು ಇತರೆ ಕೆಲಸಗಳಿಂದ ಮುಕ್ತಗೊಳಿಸಿ ಬೋಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಶಿಕ್ಷಕರು ದೇಶದ ಭವಿಷ್ಯದ ಮಾನವ ಸಂಪನ್ಮೂಲವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ಅವರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ನಗರದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಹಾಕುವ ಭದ್ರ ಬುನಾದಿಯೇ ಮುಂದಿನ ಪೀಳಿಗೆಯ ವ್ಯಕ್ತಿತ್ವ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಆಧಾರವಾಗುತ್ತದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನ ಅನಿವಾರ್ಯವಾಗಿದ್ದು, ಕನ್ನಡ ನಮ್ಮ ಮಾತೃಭಾಷೆಯಾಗಿದ್ದರೂ ಉದ್ಯೋಗ ಹಾಗೂ ಬದುಕು ಕಟ್ಟಿಕೊಳ್ಳುವ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆ ಅಗತ್ಯವಾಗಿದೆ. ಇದೇ ಕಾರಣದಿಂದ ಪೋಷಕರು ಖಾಸಗಿ ಶಾಲೆಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಮತ್ತು ಇಂಗ್ಲಿಷ್ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.ವಿಧಾನಸಭೆಯಲ್ಲಿ ತಾವು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ತಮ್ಮ ಕ್ಷೇತ್ರಕ್ಕೆ ಎಂಟು ಶಾಲೆಗಳು ಮಂಜೂರಾಗಿವೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಶಿಕ್ಷಕರಿಗೆ ಇಂಗ್ಲಿಷ್ ಬೋಧನೆಯಲ್ಲಿ ಹೆಚ್ಚಿನ ತರಬೇತಿಯ ಅಗತ್ಯವಿದ್ದು, ಅವರಿಗೆ ಆರು ತಿಂಗಳ ವಿಶೇಷ ತರಬೇತಿ ನೀಡಿದರೆ ಇಂಗ್ಲಿಷ್ ಬೋಧನೆಗೆ ಮತ್ತಷ್ಟು ಸಮರ್ಥರಾಗಲಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುವುದಾಗಿ ತಿಳಿಸಿದರು.
ನಗರದಲ್ಲಿರುವ ಗುರುಭವನವನ್ನು ಪುನರ್‌ನಿರ್ಮಿಸಿ ಹೈಟೆಕ್ ಗುರುಭವನವಾಗಿಸುವ ಚಿಂತನೆಯಿದ್ದು, ಈ ಕಾರ್ಯಕ್ಕೆ ಶಿಕ್ಷಕರ ಸಹಕಾರ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನೆ ಹೊರತುಪಡಿಸಿ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗುತ್ತಿದ್ದು, ಇದರಿಂದ ತರಗತಿಯಲ್ಲಿ ಸಂಪೂರ್ಣವಾಗಿ ಬೋಧನೆಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರನ್ನು ಇತರೆ ಕೆಲಸಗಳಿಂದ ಮುಕ್ತಗೊಳಿಸಿ ಬೋಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಲರಾಮ್, ಕ್ಷೇತ್ರ ಸಮನ್ವಯ ಅಧಿಕಾರಿ ಕುಮಾರ್, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಯೋಗೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಉಮೇಶ್, ಶಿಕ್ಷಣ ಸಲಹಾ ಸಮಿತಿ ಸದಸ್ಯ ದೇವರಾಜ್, ಖಾಸಗಿ ಶಾಲೆಗಳ ಒಕ್ಕೂಟದ ಗೌರವಾಧ್ಯಕ್ಷ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಶ್ರೀಕಾಂತ್, ಪ್ರಾಥಮಿಕ ಶಾಲಾ ತಾಲೂಕು ಸಂಘದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ನವೀನ್, ಜಿಲ್ಲಾ ಸಂಘದ ಉಪಾಧ್ಯಕ್ಷೆ ಶಾಂತಮ್ಮ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶಿಕ್ಷಕರು ಹಾಗೂ ಖಾಸಗಿ ಶಾಲಾ ಒಕ್ಕೂಟದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.