ಸಾರಾಂಶ
ಮಕ್ಕಳಿಗೆ ಗಟ್ಟಿ ಓದು ಕಲಿಸುವುದರಿಂದ ಅವರಲ್ಲಿ ಅಕ್ಷರಗಳ ಮಹತ್ವ ವಿಷಯಗಳ ಅರಿವು, ಸಂವಹನ ಕೌಶಲ್ಯ ಹಾಗೂ ಮಕ್ಕಳಿಗೆ ನಾಗರಿಕ ಪ್ರಜ್ಞೆ
ಮುಂಡರಗಿ: ಗ್ರಾಮೀಣ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಪೂರಕವಾದ ವಾತಾವರಣ ಇರಬೇಕು. ಕಥೆ, ಕಾದಂಬರಿ, ಗಟ್ಟಿ ಓದು, ಚೆಸ್, ಕೇರಂ ಆಟಗಳ ಮೂಲಕ ಮಕ್ಕಳ ಸಾಮರ್ಥ್ಯ ಹೆಚ್ಚಿಸುವಂತಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದರು.
ಅವರು ಸೋಮವಾರ ಮೈಸೂರಿನ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಗದಗ ಜಿಪಂ, ಮುಂಡರಗಿ ತಾಪಂ ಸಹಯೋಗದಲ್ಲಿ ತಾಪಂ ಸಾಮರ್ಥ್ಯ ಸೌಧದಲ್ಲಿ ಮಕ್ಕಳಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿ ಕುರಿತು ಗ್ರಂಥಾಲಯ ಮೇಲ್ವಿಚಾರಕರಿಗೆ ಎರಡು ದಿನಗಳ ಮುಖಾಮುಖಿ ತರಬೇತಿ ಉದ್ಘಾಟಿಸಿ ಮಾತನಾಡಿದರು.ವಿವಿಧ ಸೌಲಭ್ಯಗಳಿಂದ ಮಕ್ಕಳಿಗೆ ಗ್ರಂಥಾಯದ ಕಡೆ ಆಕರ್ಷಣೆಯಾಗುವ ಹಾಗೆ ತಾವು ಕಾರ್ಯನಿರ್ವಹಿಸಬೇಕು. ಈ ತರಬೇತಿಯ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಸಂಸ್ಥೆಯ ವೀಕೇಂದ್ರೀಕೃತ ತರಬೇತಿ ಸಂಯೋಜಕ ಮಂಜುನಾಥ ಮುಧೋಳ ಮಾತನಾಡಿ, ಮಕ್ಕಳಿಗೆ ಗಟ್ಟಿ ಓದು ಕಲಿಸುವುದರಿಂದ ಅವರಲ್ಲಿ ಅಕ್ಷರಗಳ ಮಹತ್ವ ವಿಷಯಗಳ ಅರಿವು, ಸಂವಹನ ಕೌಶಲ್ಯ ಹಾಗೂ ಮಕ್ಕಳಿಗೆ ನಾಗರಿಕ ಪ್ರಜ್ಞೆ ಮೂಡಿಸುವ ಹಾಗೆ ಗ್ರಂಥಾಲಯಗಳ ಮೇಲ್ವಿಚಾರಕರ ಪಾತ್ರ ಕುರಿತು ಮಾತನಾಡಿದರು.ಶಿಕ್ಷಣ ಫೌಂಡೇಶನ್ ಬಸವರಾಜ ಬಡಿಗೇರ, ವಿಷಯ ನಿರ್ವಾಹಕ ಶಾಬೂದ್ದೀನ್ ನದಾಫ್, ತರಬೇತಿ ಸುಗಮಗಾರ ಅಂದಪ್ಪ ತುರಕಾಣಿ, ತಾಲೂಕಿನ ಗ್ರಂಥಾಲಯಗಳ ಮೇಲ್ವಿಚಾರಕರು ತರಬೇತಿಯಲ್ಲಿ ಭಾಗವಹಿಸಿದ್ದರು.