ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಬ್ಬರೂ ಗ್ರಂಥಾಲಯವನ್ನು ಸದುಪಯೋಗ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಮಾನಸ ಗಂಗೋತ್ರಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ. ಚಂದ್ರಶೇಖರ್ ಕರೆ ನೀಡಿದರು.ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥನ್ ಅವರ ಜನ್ಮ ದಿನವಾದ ಆ.12ಅನ್ನು ರಾಜ್ಯ ಸರ್ಕಾರ ‘ಗ್ರಂಥಪಾಲಕರ ದಿನಾಚರಣೆ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮ ಹಾಗೂ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನದ ಗುಡಿಗಳಲ್ಲಿ ಭಕ್ತರು ತುಂಬಿ ತುಳುಕುವಂತೆ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ತುಳುಕಬೇಕು ಎಂದರು.
ಒಂದು ಪುಸ್ತಕ ನೂರು ಗೆಳಯರಿಗೆ ಸಮಾನ, ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ ಎಂಬುದು ಗ್ರಂಥಾಲಯದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ನಂಬಿಕೆಯಾಗಿತ್ತು ಎಂದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುವುದರಿಂದ ಜ್ಞಾನಾರ್ಜನೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಲು ಅನುಕೂಲವಾಗುತ್ತದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಪಠ್ಯದ ಜೊತೆಗೆ ಸಾಹಿತ್ಯ ಕೃತಿಗಳನ್ನು ಹಾಗೂ ಪತ್ರಿಕೆಗಳನ್ನು ಓದಿ ಎಂದು ಸಲಹೆ ಮಾಡಿದರು.
ಮತ್ತೊರ್ವ ಮುಖ್ಯ ಅತಿಥಿ ಶಾರದಾವಿಲಾಸ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ, ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯ ಸಮಿತಿ ಸದಸ್ಯ ಜಿ. ಆನಂದ್ ಮಾತನಾಡಿ, ಪುಸ್ತಕಗಳು ಹಂತಹಂತವಾಗಿ ವ್ಯಕ್ತಿಯನ್ನು ಬದಲಿಸುತ್ತವೆ. ಪುಸ್ತಕಗಳನ್ನು ಓದಿದರೆ ಸುಸಂಸ್ಕೃತ ನಾಗರಿಕರಾಗಬಹುದು ಎಂದರು.
ವಿಶೇಷ ಆಹ್ವಾನಿತರಾಗಿದ್ದ ರಾಖಿ ಚೆನ್ನಬಸವಣ್ಣ ಮಾತನಾಡಿ, ಕೇವಲ ಕೃತಕ ಬುದ್ಧಿಮತ್ತೆಯನ್ನು ಬಳಸದೆ ಆದಷ್ಟು ಪುಸ್ತಕಗಳನ್ನೇ ಬಳಸಿ. ಓದು ಮನುಷ್ಯನನ್ನು ಪರಿಪೂರ್ಣರನ್ನಾಗಿ, ಬರಹ ಅವನನ್ನು ನಿಖರವಾಗಿಸುತ್ತದೆ ಮತ್ತು ಮಾತು ಅವನನ್ನು ಸಿದ್ಧವಾಗಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪೀಪಲ್ಸ್ ಪಾರ್ಕ್ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಡಾ. ಬಿ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ನಾನು ಗ್ರಂಥಾಲಯದ ನಂಟಿಲ್ಲದೇ ತುಂಬಾ ಕಷ್ಟ ಪಟ್ಟೆ, ಆದರೆ, ವಿದ್ಯಾರ್ಥಿಗಳು ಗ್ರಂಥಾಲಯದ ನಂಟನ್ನು ಹೊಂದಿರಬೇಕು ಎಂದರು.ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಬಿ. ಮಂಜುನಾಥ್ ಪ್ರಾಸ್ತಾವಿಕ ಭಾಷಣ ಮಾಡಿ, ಗ್ರಂಥಪಾಲಕರ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಸುಮಾ ಬಿ. ಕೋಡಿಹಳ್ಳಿ, ಮುಖ್ಯ ಗ್ರಂಥಾಲಯಾಧಿಕಾರಿ ಟಿ. ಪದ್ಮಶ್ರೀ ವೇದಿಕೆಯಲ್ಲಿದ್ದರು.ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಗ್ರಂಥಾಲಯ ಸಹಾಯಕಿ ಎಂ.ಎಸ್. ಚಿತ್ರಾ ಓದಿದರು. ಗ್ರಂಥಾಲಯ ಸಹಾಯಕ ಎಚ್.ವಿ.ರಮೇಶ್ ಸ್ವಾಗತಿಸಿದರು. ಗ್ರಂಥಪಾಲಕ ಪಿ. ಯತಿರಾಜು ವಂದಿಸಿದರು. ಗ್ರಂಥಾಲಯ ಸಹಾಯಕಿ ಎಂ. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಮತ್ತು ತಂಡದವರು ನಾಡಗೀತೆ ಹಾಡಿದರು.
ಪೀಪಲ್ಸ್ ಪಾರ್ಕ್ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಎಸ್.ಸೌಮ್ಯಾ, ನಗರ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಸೈಯದ ನೂರುಸ್ಸಭಾ ಸಾಲಾರ್, ಕಚೇರಿಯ ಅಧೀಕ್ಷಕಿ ಎಚ್.ಲತಾ ಎಚ್.ಪ್ರಥಮ ದರ್ಜೆ ಸಹಾಯಕಿ ಎಲ್.ಶೋಭಾ ಹಾಗೂ ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.ಇದಲ್ಲದೇ ನಗರದ ಅಧೀನ ಹಾಗೂ ಶಾಖಾ ಕೇಂದ್ರ ಗ್ರಂಥಾಲಯಗಳಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸುವ ಮೂಲಕ ಹಾಗೂ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಆಚರಿಸಲಾಯಿತು.