ದೈವಾರಾಧನೆಯಿಂದ ಮನುಷ್ಯನ ಮನೋಬಲ ವೃದ್ಧಿ: ಶ್ರೀ ಸತೀಶ್ ಶರ್ಮ ಗುರೂಜೀ

| Published : May 05 2024, 02:06 AM IST

ದೈವಾರಾಧನೆಯಿಂದ ಮನುಷ್ಯನ ಮನೋಬಲ ವೃದ್ಧಿ: ಶ್ರೀ ಸತೀಶ್ ಶರ್ಮ ಗುರೂಜೀ
Share this Article
  • FB
  • TW
  • Linkdin
  • Email

ಸಾರಾಂಶ

ಸೃಷ್ಟಿಕರ್ತ ಮಹಾ ವಿಷ್ಣುವಿನ ಅವತಾರಗಳಲ್ಲಿ ನರಸಿಂಹಸ್ವಾಮಿ ಅತ್ಯಂತ ಶಕ್ತಿಶಾಲಿ ಅವತಾರವಾಗಿದ್ದು, ನರ ಮತ್ತು ಸಿಂಹ ಸ್ವರೂಪಿಯಾದ ನರಸಿಂಹ ದೇವರನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಪೂಜಿಸಿದರೆ, ನಮ್ಮ ಮನಸ್ಸಿನಲ್ಲಿನ ಭಯ ದೂರವಾಗಿಸಿ ಆತ್ಮಬಲದ ರಕ್ಷಣಾತ್ಮಕ ಕವಚವನ್ನು ಕರುಣಿಸುವ ಮೂಲಕ ಆಶೀರ್ವಾದಿಸುತ್ತಾನೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ವಿಷ್ಣು ಪಂಚಾಯತನ ಶಾಸ್ತ್ರದ ಪ್ರಕಾರ ನಿರ್ಮಿಸಿರುವ ಗಣಪತಿ, ಸೂರ್ಯ ಅಂಬಿಕಾ, ಶ್ರೀಕಂಠೇಶ್ವರ, ಆಂಜನೇಯಸ್ವಾಮಿ ಪ್ರಾಣ ಪ್ರತಿಷ್ಠಾಪನೆಯನ್ನು ಆಗಮಿಕರಾದ ಹಳ್ಳಾಡಿಯ ವೇದ ವಿದ್ವಾನ್ ಶ್ರೀಮುರುಳೀಧರ್ ಕೇದ್ಲಾಯ್ ನೇತೃತ್ವದ ವೃತ್ವಿಕರ ತಂಡ ಆಗಮ ಶಾಸ್ತ್ರದ ಪ್ರಕಾರ ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದ ಪರಂಪರಾ ಅವಧೂತ ಶ್ರೀ ಸತೀಶ್ ಶರ್ಮ ಗುರೂಜೀಗಳ ಸಂಕಲ್ಪದಂತೆ ಬೆಳಿಗ್ಗೆ ವೃಷಭ ಲಗ್ನದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಪ್ರಾಣ ಪ್ರತಿಷ್ಠಾಪನೆ, ಕಲಶಾಭಿಷೇಕ, ಕಲಾತತ್ವ ನ್ಯಾಸ, ಮಹಾಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ ನಂತರ ಪಂಚಮುಖಿ ಆಂಜನೇಯನ ಸನ್ನಿಧಿಯಲ್ಲಿ ಸಹಸ್ರ ಕದಳೀ ಮಧುಮಿಶ್ರಿತ ಹನುಮಾನ್ ಯಜ್ಞ, ಶ್ರೀ ಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಲಾತತ್ವ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ೨೫ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಮಹಾಪೂಜೆಯನ್ನು ವಿಪ್ರವೃಂದದವರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಪರಂಪರಾ ಅವಧೂತ ಶ್ರೀ ಸತೀಶ್ ಶರ್ಮ ಗುರೂಜೀ ಆಶೀರ್ವಚನ ನೀಡಿ, ಸೃಷ್ಟಿಕರ್ತ ಮಹಾ ವಿಷ್ಣುವಿನ ಅವತಾರಗಳಲ್ಲಿ ನರಸಿಂಹಸ್ವಾಮಿ ಅತ್ಯಂತ ಶಕ್ತಿಶಾಲಿ ಅವತಾರವಾಗಿದ್ದು, ನರ ಮತ್ತು ಸಿಂಹ ಸ್ವರೂಪಿಯಾದ ನರಸಿಂಹ ದೇವರನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಪೂಜಿಸಿದರೆ, ನಮ್ಮ ಮನಸ್ಸಿನಲ್ಲಿನ ಭಯ ದೂರವಾಗಿಸಿ ಆತ್ಮಬಲದ ರಕ್ಷಣಾತ್ಮಕ ಕವಚವನ್ನು ಕರುಣಿಸುವ ಮೂಲಕ ಆಶೀರ್ವಾದಿಸುತ್ತಾನೆ. ಭಕ್ತಿ- ಭಾವನೆಯಲ್ಲಿ ನಾವು ಪೂಜಿಸಿ ಆರಾಧಿಸುತ್ತೇವೆ ಅಂತೆಯೇ ಪ್ರಕೃತಿಯಲ್ಲಿನ ಪಂಚ ತತ್ವಗಳ ಸ್ವರೂಪವಾದ ಗಣಪತಿ, ಅಂಬಿಕಾ ಪರಮೇಶ್ವರಿ, ಸೂರ್ಯದೇವ, ಶ್ರೀಕಂಠೇಶ್ವರ ಸ್ವಾಮಿ ಹಾಗೂ ಶ್ರೀಕ್ಷೇತ್ರಪಾಲಕ ಪಂಚಮುಖಿ ಆಂಜನೇಯ ದೇವರ ಪ್ರಾಣ ಪತ್ರಿಷ್ಠಾಪನೆಯನ್ನು ಹಾಗೂ ದೇವಾಲಯಗಳ ಗೋಪುರ ಕಲಶ ಸ್ಥಾಪನೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದ್ದು, ಮೇ 5ರಂದು ಹರಿಹರ ಪುರದ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಸಾನಿಧದಲ್ಲಿ ಮಹಾಕುಂಭಾಭಿಷೇಕವನ್ನು ನೆರವೇರಿಸಲಾಗುವುದು ಎಂದು ಹೇಳಿದರು.

ಸಮಾರಂಭದಲ್ಲಿ ವೇದ ವಿದ್ವಾನ್ ಶ್ರೀಮುರುಳೀಧರ್ ಕೇದ್ಲಾಯ್, ಪೌರೋಹಿತ್ಯರಾದ ಆದಿತ್ಯ ಶರ್ಮ, ಗಣಪತಿ ಭಟ್, ಶ್ರೀಕ್ಷೇತ್ರದ ಸಂಚಾಲಕ ಮುರುಳೀ ಮಂದಾರ್ಥಿ, ಶ್ರೀ ಲಕ್ಷ್ಮೀ ನರಸಿಂಹ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಶ್ರೀ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು, ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.