ರಂಗಭೂಮಿಯ ರಸಾನಂದವನ್ನು ಆಸ್ವಾದಿಸಿ: ರಮೇಶ್ ಪಂಡಿತ್

| Published : Mar 30 2025, 03:05 AM IST

ರಂಗಭೂಮಿಯ ರಸಾನಂದವನ್ನು ಆಸ್ವಾದಿಸಿ: ರಮೇಶ್ ಪಂಡಿತ್
Share this Article
  • FB
  • TW
  • Linkdin
  • Email

ಸಾರಾಂಶ

ರಂಗಭೂಮಿ ಬುದ್ಧಿ ಕಸರತ್ತಿನ ವೇದಿಕೆಯಲ್ಲ, ರಂಗದಲ್ಲಿ ನೋಡಿದ್ದು ಅರ್ಥವಾಗಿ ಕೇಳಿದ್ದು, ಅನುಭವಿಸಿ ರಸಾನಂದ ಪಡೆಯಬೇಕು ಎಂದು ಹೆಸರಾಂತ ಚಲನಚಿತ್ರ ನಟ ಹಾಗೂ ರಂಗ ನಿರ್ದೇಶಕ ರಮೇಶ್ ಪಂಡಿತ್ ಹೇಳಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಂಗಭೂಮಿ ಬುದ್ಧಿ ಕಸರತ್ತಿನ ವೇದಿಕೆಯಲ್ಲ, ರಂಗದಲ್ಲಿ ನೋಡಿದ್ದು ಅರ್ಥವಾಗಿ ಕೇಳಿದ್ದು, ಅನುಭವಿಸಿ ರಸಾನಂದ ಪಡೆಯಬೇಕು ಎಂದು ಹೆಸರಾಂತ ಚಲನಚಿತ್ರ ನಟ ಹಾಗೂ ರಂಗ ನಿರ್ದೇಶಕ ರಮೇಶ್ ಪಂಡಿತ್ ಹೇಳಿದರು

ಗುರುವಾರ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು

ವಿಶ್ವ ರಂಗಭೂಮಿ ದಿನವನ್ನು ಪ್ರತಿ ವರ್ಷ ಮಾ.27ರಂದು ಆಚರಿಸಲಾಗುತ್ತದೆ. ಈ ದಿನವನ್ನು ರಂಗಭೂಮಿ ಕಲೆ, ಅದರ ಸಾಧಕರು ಮತ್ತು ಸಾಂಸ್ಕೃತಿಕ ವಿನಿಮಯ ಹಾಗೂ ಮಾನವ ಅಭಿವ್ಯಕ್ತಿಯಲ್ಲಿ ಅದರ ಪಾತ್ರವನ್ನು ಗೌರವಿಸಲು ಮೀಸಲಿಡಲಾಗಿದೆ. ರಂಗಭೂಮಿ ಕಲೆಗಳ ಮಹತ್ವವನ್ನು ಎತ್ತಿ ತೋರಿಸಲು ವೇದಿಕೆ ನಿರ್ಮಿಸುತ್ತದೆ. ಕನ್ನಡದ ಮೇರು ನಟ ಡಾ.ರಾಜಕುಮಾರ್ ಹುಟ್ಟಿದ ನೆಲದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸುತ್ತಿರುವ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗವಾಹಿನಿ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ರಂಗ ಗೌರವ ಸ್ವೀಕರಿಸಿ ಮಾತನಾಡಿದ ಚಲನಚಿತ್ರ, ಕಿರುತೆರೆ, ಹಾಗೂ ರಂಗನಟಿ ಸುನೇತ್ರ ಪಂಡಿತ್ ಮಾತನಾಡಿ, ಚಾಮರಾಜನಗರ ಜನಪದ ಮತ್ತು ರಂಗಭೂಮಿ ಕಲೆಗಳ ತವರೂರು. ವಿಶ್ವ ರಂಗಭೂಮಿ ದಿನವು ಯುವಜನರು ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಿ, ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಮತ್ತು ಕಲೆಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತದೆ. ಹಾಗೆಯೇ ರಂಗಭೂಮಿಯು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ನಾವೆಲ್ಲರೂ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸೋಣ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಹನೂರು ಚೆನ್ನಪ್ಪ ಮಾತನಾಡಿ, ರಂಗಭೂಮಿಯು ಭಾಷೆ ಮತ್ತು ಕಲೆಗಳ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿದೆ. ಆದುದರಿಂದ ಯುವಜನರು ರಂಗಭೂಮಿಗೆ ಬರಬೇಕು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ರಂಗ ಸಂದೇಶವನ್ನು ವಾಚಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ , ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್, ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ, ರಂಗ ದೀವಿಗೆ ಕಲೆ ನಟರಾಜ್ ,ಮೈಸೂರಿನ ಜಗ್ಗು ಜಾದುಗಾರ್ ಹಾಜರಿದ್ದರು. ಸಿಜಿಕೆ ಪ್ರಶಸ್ತಿ ಪುರಸ್ಕೃತ ಯುವ ರಂಗಕರ್ಮಿ ಹಾಗೂ ಕರ್ನಾಟಕ ರಂಗ ಪರಿಷತ್ತಿನ ಜಿಲ್ಲಾಧ್ಯಕ್ಷ ಉಮ್ಮತ್ತೂರು ಬಸವರಾಜ್, ಹರದನಹಳ್ಳಿ ನಟರಾಜ್ ಮತ್ತು ಸಂಗಡಿಗರು ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ನಂತರ ಸಿಜಿಕೆ ಪ್ರಶಸ್ತಿ ಪುರಸ್ಕೃತ ಯುವ ರಂಗಕರ್ಮಿ ರೂಬಿನ್ ಸಂಜಯ್ ನಿರ್ದೇಶನದಲ್ಲಿ ರಂಗವಾಹಿನಿ ಕಲಾವಿದರು ನಡೆಸಿಕೊಟ್ಟ ಬೆಲ್ಲದ ದೋಣಿ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.