ಸ್ವಅನುಭವದ ಕಲಿಕೆಯಿಂದ ಆನಂದ ಪ್ರಾಪ್ತಿ: ಮಾನಸಿ ಶೇಟ್

| Published : Oct 31 2024, 12:53 AM IST

ಸಾರಾಂಶ

ಇಂದಿನ ವಿದ್ಯಾರ್ಥಿಗಳು ಕೇಳಿ ಕಲಿಯುವುದಕ್ಕಿಂತ ಮಾಡಿ ನೋಡಿ ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ ಎಂದು ಉಪನ್ಯಾಸಕಿ ಮಾನಸಿ ಶೇಟ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಂದಿನ ವಿದ್ಯಾರ್ಥಿಗಳು ಕೇಳಿ ಕಲಿಯುವುದಕ್ಕಿಂತ ಮಾಡಿ ನೋಡಿ ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ ಎಂದು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಪ್ರಾಕ್ತನ ವಿದ್ಯಾರ್ಥಿನಿ, ಪ್ರಸ್ತುತ ಸಿಟಿ ಆಸ್ಪತ್ರೆಯ ಉಪನ್ಯಾಸಕಿ ಮಾನಸಿ ಶೇಟ್ ಹೇಳಿದರು.

ಅವರು ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ ಇಲ್ಲಿನ ವಿಜ್ಞಾನ ಕ್ಲಬ್ ಆಯೋಜಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಪ್ರಾಚ್ಯ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ಸೃಜನ ಶೀಲತೆಯಿಂದ ತಯಾರಿಸಿದ ವಿಜ್ಞಾನದ ಮಾದರಿಗಳು ಮುಂದೆ ಯಂತ್ರೋಪಕರಣವಾಗಿ ಸಿದ್ಧವಾಗಿ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಸ್ವಅನುಭವದ ಕಲಿಕೆಯಿಂದ ಮನಸ್ಸಿಗೆ ಆನಂದ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಚರ್ಚಿನ ಸಹಾಯ ಧರ್ಮಗುರು ಫಾ| ಓಲಿವರ್ ನಜ್ರೆತ್ ಮಾತನಾಡಿ, ನಮ್ಮ ಕರಾವಳಿ - ತುಳುನಾಡಿನಲ್ಲಿ ನಮ್ಮ ಹಿರಿಯರು ಬಳಸಿದ ಹಳೆಯ ಪರಿಕರಗಳನ್ನು ಸಂಗ್ರಹಿಸಿ ಸಹ ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಾಚ್ಯ ವಸ್ತುಗಳ ಪ್ರದರ್ಶನ ಮಾಡಿದ ಇತಿಹಾಸ ಕ್ಲಬ್ಬಿನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳಾದ ಅಕ್ಷತಾ ಸ್ವಾಗತಿಸಿದರು. ಆಶ್ನಿ ಡಿ’ಸೋಜ ನಿರೂಪಿಸಿ, ಶ್ರೀನಿಧಿ ವಂದಿಸಿದರು.

ಆಕರ್ಷಕ ಪ್ರದರ್ಶನ

ಹಳೆ ಕಾಲದ ಪೀಕದಾನಿ, ಟಾರ್ಚ್, ನಾಣ್ಯ, ನೋಟು, ಅರೆಯುವ ಕಲ್ಲು, ಕಡೆಗೋಲು, ಪಾತ್ರೆ, ಪರಿಕರಗಳ ಪ್ರದರ್ಶನ ಸಂದರ್ಶಕರನ್ನು ಆಕರ್ಷಿಸಿದವು. ವಿದ್ಯುತ್‌ವಿಲ್ಲದ ಕಾಲದಲ್ಲಿ ಜನರು ದಿನಬಳಕೆಗೆ, ಅಡುಗೆಗೆ ಬಳಸುವ ಸಾಮಗ್ರಿಗಳನ್ನು ಕಂಡು ವಿದ್ಯಾರ್ಥಿಗಳು ಸೋಜಿಗ ವ್ಯಕ್ತ ಪಡಿಸಿದರು. ಸಂಸ್ಥೆಯ ಎಲ್ಲಾ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಶಿಕ್ಷಕರು ಸಹಕರಿಸಿದರು. ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಈ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.