ಸಾರಾಂಶ
ಚಾಮರಾಜನಗರ: ನಗರದ ಸೇವಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸಾಮರಸ್ಯ ಸಂಗಮ 38ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಸೇವಾಭಾರತಿ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಕಲೆ, ಜಾನಪದ, ಸಂಸ್ಕೃತಿ, ಪರಂಪರೆ, ದೈವಿಕತೆ ಕುರಿತ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ರೂಪಕಗಳು, ಸೈಕಲ್ ಸಾಹಸ, ಬೆಂಕಿ ಸಾಹಸ ಸೇರಿದಂತೆ ವೈವಿಧ್ಯಮಯ ಶಾರೀರಿಕ ಕಾರ್ಯಕ್ರಮಗಳು ನೋಡುಗರ ಹುಬ್ಬೇರಿಸಿತು. ಸೇವಾಭಾರತಿ ಶಿಕ್ಷಣ ಸಂಸ್ಥೆಯ ಶಾಲಾ ತಂಡಗಳೊಂದಿಗೆ ನಡೆಸಿಕೊಟ್ಟ ಅತಿಥಿ ವಂದನೆ ಹಾಗೂ ಘೋಷ್ ವ್ಯೂಹ್ ರಚನೆ ನೋಡುಗರ ಗಮನ ಸೆಳೆಯಿತು.ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ಮುರುಳಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಕರ್ನಾಟಕದ ಶ್ರೇಷ್ಠ ದೊರೆಗಳು ಆಳ್ವಿಕೆ ನಡೆಸಿ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿ ಕಲೆ, ಸಾಹಿತ್ಯ, ವಾಸ್ತುಶಿಲ್ಪಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಮೈಸೂರು ಆರ್ ಎಸ್ ಎಸ್ ಸಂಘಚಾಲಕ ವಾಸುದೇವಭಟ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ಬಾಲರಾಮನನ್ನು ಪ್ರತಿಷ್ಠಾಪಿಸಿ ಇಂದಿಗೆ ಒಂದು ವರುಷವಾಗಿದ್ದು, ಇಂತಹ ಸಂಧರ್ಭದಲ್ಲಿ ಸಾಮರಸ್ಯ ಸಂಗಮ ಕಾರ್ಯಕ್ರಮವು ಸೇವಾಭಾರತಿಯಲ್ಲಿ ಅರ್ಥಪೂರ್ಣವಾಗಿ ನಡೆದಿದೆ ಎಂದು ತಿಳಿಸಿದರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಂಪದ್ಭರಿತ ಜಿಲ್ಲೆಯಾಗಿದ್ದು ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿವೆ. ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದ್ದು ಈ ನಿಟ್ಟಿನಲ್ಲಿ ಸೇವಾಭಾರತಿ ಶಿಕ್ಷಣ ಸಂಸ್ಥೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದ ಮೂಲಕ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕಿರಣ್, ಖ್ಯಾತ ಶಿಶು ತಜ್ಞ ಹಾಗೂ ಆರ್ ಎಸ್ ಎಸ್ ಮೈಸೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಡಾ.ವಾಮನರಾವ್ ಬಾಪಟ್ , ನಗರಸಭೆ ಅಧ್ಯಕ್ಷ ಸುರೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಮೈಸೂರಿನ ಆದಿತ್ಯ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಕೆರೆಗೋಡು ಮಾಧವ ವಿದ್ಯಾಲಯದ ಕಾರ್ಯದರ್ಶಿ ಶ್ರೀಪತಿ, ಉದ್ಯಮಿ ಪ್ರೇಮ್ ಕುಮಾರ್, ಹರ್ಮನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಿಇಒ ಪ್ರವೀಣ್ ಪೈ ಮಾತನಾಡಿದರು.ಸೇವಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮ.ವೆಂಕಟರಾಮು, ಕಾರ್ಯದರ್ಶಿ ವಾಸುದೇವರಾವ್, ಆಡಳಿತಾಧಿಕಾರಿ ಎಸ್.ರಮೇಶ್, ಉಪಾಧ್ಯಕ್ಷ ಕೆ.ಬಾಲಸುಬ್ರಮಣ್ಯಂ, ಖಜಾಂಚಿ ಮಧು, ಸದಸ್ಯರಾದ ರಾ.ಸತೀಶ್, ಎಸ್.ಬಾಲಸುಬ್ರಮಣ್ಯಂ, ವೆಂಕನಾಗಪ್ಪಶೆಟ್ಟಿ, ಹೇಮಂತ್ ಇದ್ದರು.