ಉತ್ತಮ ಫಲಿತಾಂಶಕ್ಕಾಗಿ ಸರ್ಕಾರಿ ಶಾಲೆಗೆ ದಾಖಲಿಸಿ

| Published : May 17 2025, 01:29 AM IST

ಸಾರಾಂಶ

ಖಾಸಗಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಸರ್ಕಾರ ಶಿಕ್ಷಣ, ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಇತರೆ ಸೌಲಭ್ಯ ಉಚಿತವಾಗಿ ನೀಡುತ್ತಿದೆ.

ಕುಷ್ಟಗಿ:

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದುಕೊಂಡಿದ್ದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕೆಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪ್ರಧಾನ ಮಂತ್ರಿ ಪೋಷಣಾ ಶಕ್ತಿ ನಿರ್ಮಾಣ ಯೋಜನೆಯಡಿ ನಡೆದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಖಾಸಗಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದ ಅವರು, ಸರ್ಕಾರ ಶಿಕ್ಷಣ, ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಇತರೆ ಸೌಲಭ್ಯ ಉಚಿತವಾಗಿ ನೀಡುತ್ತಿದೆ. ಈ ಎಲ್ಲ ಸೌಲಭ್ಯವಿರುವಾಗ ಖಾಸಗಿ ಶಾಲೆಗಳಿಗೆ ಏಕೆ ಸೇರಿಸಬೇಕು. ಸರ್ಕಾರಿ ಶಾಲೆ ಉಳಿಸಿ- ಬೆಳೆಸಲು ಶಿಕ್ಷಣ ಇಲಾಖೆ ಜತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ಕನ್ನಡ ಶಾಲೆಗಳು ಉಳಿಯಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಈಗಾಗಲೇ ಆಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಲಾಗಿದೆ. ಖಾಸಗಿಗಿಂತ ನಮ್ಮ ಶಾಲೆಗಳು ಕಮ್ಮಿ ಇಲ್ಲ ಎಂದು ಹೇಳಿದರು.

ಪುರಸಭೆ ಸದಸ್ಯ ವಸಂತ ಮೇಲಿನಮನಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಕೌದಿ, ಅಕ್ಷರ ದಾಸೋಹ ಅಧಿಕಾರಿ ಸೋಮನಗೌಡ ಪಾಟೀಲ ಮಾತನಾಡಿದರು.

ಈ ವೇಳೆ ಜೀವನಸಾಬ್‌ ಬಿನ್ನಾಳ, ಸೋಮಲಿಂಗಪ್ಪ ಗುರಿಕಾರ, ಪವಾಡೆಪ್ಪ ಚೌಡ್ಕಿ, ನಿಂಗಪ್ಪ ಕಟ್ಟಿಹೊಲ, ಶಿವಪ್ಪ ಮಾಟಲದಿನ್ನಿ, ವೆಂಕಟೇಶ, ಜಮೀರಪಾಷಾ, ರಾಜೇಸಾಬ್‌ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಎಸ್‌ಡಿಎಂಸಿ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.