ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ: ಕೋಸಂಬೆ

| Published : Feb 01 2025, 12:00 AM IST

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ: ಕೋಸಂಬೆ
Share this Article
  • FB
  • TW
  • Linkdin
  • Email

ಸಾರಾಂಶ

Enroll out-of-school children in school: Kosambe

-ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಪ್ರಗತಿ ಪರಿಶೀಲನಾ ಸಭೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ "ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ " ಶೀರ್ಷಿಕೆಯಡಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ "ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009 ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲಿದೆ. ಜಿಲ್ಲೆಯ ಸುಮಾರು 54,481 ಮಕ್ಕಳ ಆಧಾರ್ ಮೌಲ್ಯೀಕರಣ ಆಗಬೇಕಾಗಿದ್ದು, ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದ ಮೇರೆಗೆ ಒಂದು ವಾರದಲ್ಲಿ ಇದನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಇದುವರೆಗೆ ಈ ಕಾರ್ಯ ಆಗದೇ ಇರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಆಯೋಗ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.

ಬಡ ಮಕ್ಕಳು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಬಾರದು. ಶಿಶ್ಯವೇತನ, ಶೈಕ್ಷಣಿಕ ಸೌಲಭ್ಯಗಳು ಅವರಿಗೆ ಸಕಾಲಕ್ಕೆ ದೊರಕಿಸುವ ಸದುದ್ದೇಶವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಂದಿದೆ. ಈ ಹಿನ್ನೆಲೆಯಲ್ಲಿ ಆಧಾರ ಪರಿಶೀಲಿಸಿ ಸರಿಪಡಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಸ್ಯಾಟ್ಸ (SATS) ಅಪಾರ(APAAR) ತಂತ್ರಾಂಶಗಳ ಬಗ್ಗೆ ಈಗಾಗಲೇ ಗೂಗಲ್ ಮತ್ತು ಭೌತಿಕ ತರಬೇತಿಗಳನ್ನು ಸಹ ನೀಡಲಾಗಿದೆ. ಕಾರಣ ಆಧಾರ್ ಸರಿಪಡಿಸುವ ಜೊತೆಗೆ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವಂತೆ ಅವರು ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ -2016ರ ಅನ್ವಯ ಸಕಲ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳ ಸುರಕ್ಷಾ ಸಮಿತಿಗಳನ್ನು ರಚಿಸಬೇಕು. ಕಡ್ಡಾಯವಾಗಿ ಸಲಹಾ ಪೆಟ್ಟಿಗೆ ಇಡಬೇಕು. ಕಾಲಕಾಲಕ್ಕೆ ಬಿಸಿ ಊಟ ಸಮಸ್ಯೆಗಳನ್ನು ಬಗೆಹರಿಸಬೇಕು. ಮಕ್ಕಳಿಗೆ ಸಮರ್ಪಕ ಆಹಾರ ಪೂರೈಕೆ ಆಗದಿದ್ದಲ್ಲಿ, ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದರು.

ಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ, ಶೌಚಾಲಯ, ಶುದ್ಧ ಕುಡಿವ ನೀರು, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇನ್ನಿತರ ಕುಂದುಕೊರತೆಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ಅವರು ಪಡೆದರು.

ಇಲಾಖೆಯ ಉಪನಿರ್ದೇಶಕ ಚೆನ್ನಬಸಪ್ಪ ಮುಧೋಳ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗಕ್ಕೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವಸ್ತುನಿಷ್ಠ ವರದಿಗಳನ್ನು ಸಲ್ಲಿಸಬೇಕು. ಯಾವುದೇ ರೀತಿಯ ಸಬೂಬು ಹೇಳದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ತಿಳಿಸಿದರು.

------

....ಕೋಟ್....ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಕಡ್ಡಾಯವಾಗಿ ಅಭ್ಯರ್ಥಿಗಳ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಬದ್ಧತಾ ಪ್ರಮಾಣ ಪತ್ರವನ್ನು ಪಡೆಯಲು ಸೂಚಿಸಿದೆ.

- ರಾಜ್ಯ ಶಶಿಧರ್ ಕೋಸಂಬೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು.

--------

ಫೋಟೊ: ಯಾದಗಿರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009 ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಮಾತನಾಡಿದರು.

31ವೈಡಿಆರ್1