ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ: ಸುಜಾತಾ ದೊಡ್ಡಮನಿ

| Published : Feb 01 2025, 12:00 AM IST

ಸಾರಾಂಶ

ಸದೃಢ ಶರೀರ ಕಾಯ್ದುಕೊಳ್ಳಬೇಕಾದರೆ ವಿದ್ಯಾರ್ಥಿಗಳು, ಸ್ತ್ರೀ-ಪುರುಷರು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸುಜಾತಾ ದೊಡ್ಡಮನಿ ಹೇಳಿದರು.

ಶಿರಹಟ್ಟಿ: ಎಲ್ಲದಕ್ಕಿಂತಲೂ ಹೆಚ್ಚು ಜೀವನದಲ್ಲಿ ಆರೋಗ್ಯ ಬಹಳ ಮುಖ್ಯ. ಇಂದಿನ ದಿನಗಳಲ್ಲಿ ಪರಿಸರ ಅಸಮತೋಲನದಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಿರಹಟ್ಟಿ, ತಾಲೂಕು ವೈದ್ಯರ ಸಂಘ ಹಾಗೂ ಜಯಪ್ರಿಯ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಸಹಯೋಗದಲ್ಲಿ ಪಟ್ಟಣದ ಕೆವಿಜಿ ಬ್ಯಾಂಕ್ ಹಿಂದೆ ಇರುವ ಮಾತೋಶ್ರೀ ಕ್ಲಿನಿಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸದೃಢ ಶರೀರ ಕಾಯ್ದುಕೊಳ್ಳಬೇಕಾದರೆ ವಿದ್ಯಾರ್ಥಿಗಳು, ಸ್ತ್ರೀ-ಪುರುಷರು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಲ್ಲಿ ನಿರ್ಲಕ್ಷ ಸಲ್ಲದು. ಬದಲಾದ ಜೀವನ ಶೈಲಿ ಮತ್ತು ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿ ತೊಡಗಿಸಿಕೊಂಡಿರುವ ಯುವ ಜನತೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿ ತಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಸದೃಢ ದೇಹದಲ್ಲಿ ಸಮೃದ್ಧ ಮನಸ್ಸಿರುತ್ತದೆ. ಆರೋಗ್ಯ ಇದ್ದರೆ ನಾವು ಸುಖವಾಗಿ ಬಾಳಲು ಸಾಧ್ಯ ಎಂದರು.

ಹೃದಯ ರೋಗ, ಮಧುಮೇಹ ತಜ್ಞ ಡಾ. ಪ್ರಕಾಶ ಹೊಸಮನಿ ಮಾತನಾಡಿ, ಮಾನವನ ದೇಹದಲ್ಲಿರುವ ಪಂಚೇಂದ್ರಿಯಗಳಲ್ಲಿ ಅತ್ಯಂತ ಮಹತ್ವವಾದ ಅಂಗ ಕಣ್ಣು. ಕಣ್ಣು ಇದ್ದರೆ ಸುಂದರವಾದ ಪ್ರಪಂಚ ನೋಡಲು ಸಾಧ್ಯ. ಆದ್ದರಿಂದ ನಾವು ಕಣ್ಣುಗಳನ್ನು ಬಹಳ ಸುರಕ್ಷತೆಯಿಂದ ನೋಡಿಕೊಳ್ಳಬೇಕು. ನಮ್ಮ ದೇಹವನ್ನು ಎಷ್ಟು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆ ನಮ್ಮ ಕಣ್ಣುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್‌ಗಳಿಂದ ಕಣ್ಣಿನ ಮೇಲೆ ದೃಷ್ಟರಿಣಾಮ ಬೀರುತ್ತಿದೆ.ಎಂದರು.

ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹುಮಾಯೂನ್ ಮಾಗಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಕನಸು ಕಾಣುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಯಾವುದೇ ಕೆಲಸ ಮಾಡಲು ಮೊದಲು ನಾವು ಆರೋಗ್ಯವಂತಾಗಿರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗಲು ವೈಯಕ್ತಿಕ ಸ್ವಚ್ಛತೆಯ ಕಡೆ ಗಮನ ಹರಿಸಬೇಕು. ನಂತರ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಮನುಷ್ಯನ ಜೀವನ ಮತ್ತೊಬ್ಬರ ಬಾಳು ಬೆಳಗುವಂತಿರಬೇಕು. ಜೀವಿತಾವಧಿಯಲ್ಲಿ ಪರಸ್ಪರ ಸಹಾಯ-ಸಹಕಾರ ಮಾಡಬೇಕು. ಎಲ್ಲರಿಗೂ ಕಣ್ಣು ಅತ್ಯಂತ ಅವಶ್ಯವಾದ ಅಂಗವಾಗಿದ್ದರಿಂದ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ವೈದ್ಯರು ನೀಡಿದ ಮಾಹಿತಿ ಪ್ರಕಾರ ಸಕ್ಕರೆ ಕಾಯಿಲೆ ಹೊಂದಿದವರು, ಶಾಲಾ ಮಕ್ಕಳು ಕಡ್ಡಾಯವಾಗಿ ಕಣ್ಣು ಪರೀಕ್ಷಿಸಿಕೊಳ್ಳಬೇಕು ಎಂದರು.

ಡಾ. ಬಸವರಾಜ ಹಳ್ಳೆಮ್ಮನವರ ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಡಾ. ಜಯಪಾಲಸಿಂಗ್ ಸಮೋರೇಕರ್, ಡಾ. ಸಂಜೀವ ನಾರಪ್ಪನವರ, ಪುನೀತ್ ಓಲೇಕಾರ, ಡಾ. ಸುನೀಲ ಬುರಬುರೆ, ದೇವಪ್ಪ ಆಡೂರ, ಡಾ. ವೆಂಟರಾವ್ ಕಟ್ಟಿ, ಡಾ. ರೇಣುಕಾ ಪೂಜಾರ, ಡಾ. ವಿ.ವಿ. ಮಂಗಸೂಳಿ ಇತರರು ಇದ್ದರು.