ಸರ್ಕಾರಿ ಶಾಲಾ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಾಗಬೇಕು

| Published : Nov 30 2024, 12:48 AM IST

ಸರ್ಕಾರಿ ಶಾಲಾ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮಾಲೂರು ತಾಲೂಕಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಸಂಖ್ಯೆ ಇಳಿಮುಖವಾಗುತ್ತಿದ್ದು, ದಾಖಲಾತಿಗಳನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಗಿದ್ದು, ಖಾಸಗಿ ಶಾಲೆ ಕಾಲೇಜುಗಳಿಗೆ ಪೈಪೋಟಿ ನೀಡುವಂತಹ ಉತ್ತಮ ಪರಿಸರ ನಿರ್ಮಾಣ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಸೌಲಭ್ಯ ಕಲ್ಪಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಆಗಮಿಸುವ ಬಡ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಮೂಲಭೂತ ಸೌಲತ್ತುಗಳ ಜತೆಯಲ್ಲಿ ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಲು ೯ ಕೋಟಿ ರು.ಗಳನ್ನು ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ವತಿಯಿಂದ ಸಾಂಸ್ಕೃತಿಕ ಸಮಿತಿ ರಾಷ್ಟ್ರೀಯ ಯೋಜನೆ ಎನ್‌ಸಿಸಿ, ಕ್ರೀಡಾ, ಭಾರತ್ ಸ್ಕೌಟ್ಸ್, ಗೈಡ್ಸ್, ರೆಡ್ ಕ್ರಾಸ್, ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ, ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಎಂ.ಎಸ್ ನರಸಿಂಹಮೂರ್ತಿ ,ಜಾನಪದ ಕಲಾವಿದ ಪಿಚ್ಚಹಳ್ಳಿ ಶ್ರೀನಿವಾಸ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಾಗಲಿ

ತಾಲೂಕಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಸಂಖ್ಯೆ ಇಳಿಮುಖವಾಗುತ್ತಿದ್ದು, ದಾಖಲಾತಿಗಳನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಗಿದ್ದು, ಖಾಸಗಿ ಶಾಲೆ ಕಾಲೇಜುಗಳಿಗೆ ಪೈಪೋಟಿ ನೀಡುವಂತಹ ಉತ್ತಮ ಪರಿಸರ ನಿರ್ಮಾಣ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ತಂದು ಮೂಲಭೂತ ಸೌಲತ್ತುಗಳು ಜತೆಯಲ್ಲಿ ಕಾಲೇಜಿನಲ್ಲಿನ ಕೊಠಡಿಗಳ ಕೊರತೆಯನ್ನು ನೀಗಿಸಲಾಗಿದೆ ಎಂದರು.

ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಆಗಮಿಸುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನೂತನ ಕೊಠಡಿಗಳ ನಿರ್ಮಾಣಕ್ಕೆ ೯ ಕೋಟಿ ರೂಗಳನ್ನು ಬಿಡುಗಡೆಗೊಳಿಸಿದ್ದು,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ರಂಗಮಂದಿರ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದರು.

ತವರಿನಲ್ಲಿ ಸನ್ಮಾನಕ್ಕೆ ಸಂತಸ

ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಾಲೂರು ಪಟ್ಟಣದಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನಾನು ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರೂ ಪ್ರವೃತ್ತಿಯಾಗಿ ಹಾಸ್ಯ ಸಾಹಿತಿ ಹಾಗೂ ಲೇಖಕರಾಗಿ ಸಮಾಜದಲ್ಲಿ ಗುರುತಿಸಿಕೊಂದ್ದೇನೆ ಎಂದರು.

ನನಗೆ ನನ್ನ ತವರೂರುಲ್ಲಿ ಸನ್ಮಾನ ಮಾಡುತ್ತಿರುವುದು ಮರೆಯಲಾರದ ಕ್ಷಣ. ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಹುದ್ದೆಗಳನ್ನು ಸೇವೆ ಸಲ್ಲಿಸಬಹುದಾಗಿದೆ. ಕನ್ನಡ ಭಾಷೆಗೆ ಎರಡು ಸಹಸ್ರ ವರ್ಷಗಳ ಇತಿಹಾಸವಿದೆ ತನ್ನ ಎಲ್ಲಾ ಭಾಷೆಯ ಲಿಪಿಗಳು ಕನ್ನಡ ಭಾಷೆಯಲ್ಲಿದ್ದು ಲಿಪಿಗಳ ರಾಣಿ ಆಗಿದೆ ಎಂದರು.

ಕನ್ನಡದಲ್ಲೇ ವ್ಯವಹರಿಸಿ:

ಕನ್ನಡ ಭಾಷೆಯಲ್ಲಿ ಮಾತನಾಡುವುದೇ ಬರೆಯುವುದು, ಬರೆಯುವುದೇ ಮಾತನಾಡುವುದು,ಇದು ಕನ್ನಡ ಭಾಷೆಯ ವಿಶೇಷವಾಗಿದೆ ಎಂದ ಹಾಸ್ಯ ಸಾಹಿತಿಗಳು ಇಂಗ್ಲಿಷ್ ಬೇರೆ ಬೇರೆ ಭಾಷೆಗಳಿಂದ ಪದಗಳು ಸೇರ್ಪಡೆಯಾಗಿರುವಂತೆ ಕನ್ನಡಕ್ಕೆ ಇತರ ಭಾಷೆಗಳ ಪದಗಳು ಸೇರಿಸಿಕೊಂಡಾಗ ಭಾಷೆ ಅಭಿವೃದ್ಧಿಯಾಗಬಹುದು ಎಂದು ಅಭಿಪ್ರಾಯ ಪಟ್ಟರು. ನಾವೆಲ್ಲರೂ ಕನ್ನಡದಲ್ಲಿ ಮಾತನಾಡೋಣ ಬರೆಯೋಣ ಇತರರಿಗೂ ಕನ್ನಡ ಭಾಷೆಯ ಕಲಿಸುವ ಕೆಲಸ ಮಾಡೋಣ ಎಂದರು.

ಜಾನಪದ ಕಲಾವಿದ ಪಿಚ್ಚಹಳ್ಳಿ ಶ್ರೀನಿವಾಸ್ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕೋಮಲ ನಾರಾಯಣ್, ಪ್ರಾಂಶುಪಾಲ ಅಶ್ವತ್ ನಾರಾಯಣ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ನಯೀಮ್ ಉಲ್ಲಾ, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ.ಲಕ್ಷ್ಮೀ ನಾರಾಯಣ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ ಮುನೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಆಂಜನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಸದಸ್ಯರು ಹಾಜರಿದ್ದರು.