ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ

| Published : May 16 2025, 01:53 AM IST

ಸಾರಾಂಶ

ಕೆಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಫಲಿತಾಂಶ ಜಿಲ್ಲಾ ಮಟ್ಟದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಹಿಂದೆ ಮಕ್ಕಳ ದಾಖಲಾತಿ ಇಲ್ಲದ ಪರಿಣಾಮ ಹಲವು ಗ್ರಾಮಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆ ಪೈಕಿ ಈ ಸಾಲಿನಲ್ಲಿ 5 ಗ್ರಾಮಗಳಲ್ಲಿ ಮುಚ್ಚಿರುವ ಶಾಲೆಗಳು ಪುನಾರಂಭಗೊಳ್ಳುತ್ತಿವೆ. ಮಕ್ಕಳ ಮನೆ ಕೂಡ ಮೂರು ಕಡೆ ಆರಂಭಗೊಳ್ಳುತ್ತಿವೆ. ಮಕ್ಕಳ ಮನೆ ಮೂಲಕ ಪೂರ್ವ ಪ್ರಾಥಮಿಕ ಶಾಲೆಗಳಿಂದಲೇ ಇಂಗ್ಲೀಷ್ ಬೋಧನೆಗೆ ಒತ್ತು ನೀಡಲಾಗಿದೆ. ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ನಮ್ಮ ಮಕ್ಕಳ ಮನೆ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಈ ಸಾಲಿನ ಶಾಲಾ ದಾಖಲಾತಿ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ 40ಕ್ಕೂ ಅಧಿಕ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವುದು ಅತ್ಯಂತ ಸಂತೋಷದಾಯಕ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಹರ್ಷ ವ್ಯಕ್ತಪಡಿಸಿದರು.

ಬುಧವಾರ ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ "ನಮ್ಮ ಶಾಲೆ ನಮ್ಮ ಜವಾಬ್ದಾರಿ " ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಫಲಿತಾಂಶ ಜಿಲ್ಲಾ ಮಟ್ಟದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಹಿಂದೆ ಮಕ್ಕಳ ದಾಖಲಾತಿ ಇಲ್ಲದ ಪರಿಣಾಮ ಹಲವು ಗ್ರಾಮಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆ ಪೈಕಿ ಈ ಸಾಲಿನಲ್ಲಿ 5 ಗ್ರಾಮಗಳಲ್ಲಿ ಮುಚ್ಚಿರುವ ಶಾಲೆಗಳು ಪುನಾರಂಭಗೊಳ್ಳುತ್ತಿವೆ. ಮಕ್ಕಳ ಮನೆ ಕೂಡ ಮೂರು ಕಡೆ ಆರಂಭಗೊಳ್ಳುತ್ತಿವೆ. ಮಕ್ಕಳ ಮನೆ ಮೂಲಕ ಪೂರ್ವ ಪ್ರಾಥಮಿಕ ಶಾಲೆಗಳಿಂದಲೇ ಇಂಗ್ಲೀಷ್ ಬೋಧನೆಗೆ ಒತ್ತು ನೀಡಲಾಗಿದೆ. ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ನಮ್ಮ ಮಕ್ಕಳ ಮನೆ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಈ ಬಾರಿ ಅದು 5ನೇ ಸ್ಥಾನಕ್ಕೇರಿದೆ.ಮುಂಬರುವ ಶೈಕ್ಷಣಿ ಸಾಲಿನ ಫಲಿತಾಂಶ ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥಾನದಲ್ಲಿ ಇರಬೇಕೆಂಬುದು ನಮ್ಮೆಲ್ಲರ ಮೊದಲ ಆದ್ಯತೆಯಾಗಿದೆ.ಈ ಸಲುವಾಗಿ ಆರಂಭದಿಂದಲೇ ಪ್ರಾಥಮಿಕ ಶಾಲಾ ಶೈಕ್ಷಣಿಕ ಪ್ರಗತಿಗೆ ಒತ್ತುನೀಡುವ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲಾಗಿದೆ. ನಮ್ಮ ಶೈಕ್ಷಣಿಕ ಬೆಳವಣಿಗೆಯನ್ನು ಗಮನಿಸುತ್ತಿರುವ ಪೋಷಕರು ಈ ಬಾರಿ ತಮ್ಮ ಮಕ್ಕಳನ್ನು ನಮ್ಮ ಸರ್ಕಾರಿ ಶಾಲಾ ಕಾಲೇಜುಗಳಿಗೆ ದಾಖಲಿಸುವ ವಿಶ್ವಾಸವನ್ನು ಹೊಂದಲಾಗಿದೆ. ಇದಕ್ಕೆ ಕ್ಷೇತ್ರದ ಜನಪ್ರಿಯ ಶಾಸಕರಾದ ಮಂಜಣ್ಣ ಅವರ ಸಹಕಾರವಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ನಮ್ಮ ಶಿಕ್ಷಕರು ಸೇರಿದಂತೆ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಉತ್ತಮ ವೇತನ ನೀಡುತ್ತಿದೆ. ನಮ್ಮ ಮೊದಲ ಆದ್ಯತೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವುದು ಮತ್ತು ಅಕ್ಕಪಕ್ಕದ ಮನೆಗಳ ಪೋಷಕರಿಗೆ ತಿಳಿವಳಿಕೆ ನೀಡಬೇಕಿದೆ. ಬಹುಮುಖ್ಯವಾಗಿ ನಮ್ಮ ಪೋಷಕರು ಮಕ್ಕಳ ಮುಂದೆ ನಮ್ಮ ಶಿಕ್ಷಕರನ್ನು ವಿಮರ್ಶಿಸಬೇಡಿ, ಬದಲಾಗಿ ಏನಾದರೂ ಇದ್ದರೇ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಪ್ರಶ್ನಿಸಿ. ಮನೆಗಳಲ್ಲಿ ಮಕ್ಕಳೊಂದಿಗೆ ಕನಿಷ್ಟ ಒಂದು ಗಂಟೆಯಾದರೂ ಓದುವ ನಿಟ್ಟಿನಲ್ಲಿ ಸಮಾಲೋಚನೆ ಮಾಡಲೇಬೇಕು. ಇದು ಅವರು ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಮನವಿ ಮಾಡಿದರು.ನಮ್ಮ ತಾಲೂಕಿನವರೆ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಸಿಆರ್‌ಪಿ, ಇಸಿಒ, ಬಿಆರ್‌ಸಿ ಇವರನ್ನು ಈ ಸಾಲಿನಲ್ಲಿ ಅವರು ಓದಿದ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ. ಇದು ನಮ್ಮ ಮೂಲ ಆಶಯವಾದ ನಮ್ಮ ಶಾಲೆ ನಮ್ಮ ಜವಾಬ್ದಾರಿಗೆ ದೊಡ್ಡ ಅರ್ಥತಂದುಕೊಡಲಿದೆ. ಇದರೊಂದಿಗೆ ಪೋಷಕರು ಕೂಡ ತಮ್ಮ ಊರಿನ ಶಾಲೆಯನ್ನು ಒಮ್ಮೆಯಾದರೂ ಅವಲೋಕನ ಮಾಡಿ, ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ ಅವರು ಮಾತನಾಡಿ, ತಾಲೂಕಿನಲ್ಲಿ 514ಮಂದಿ ಅಡುಗೆ ಸಿಬ್ಬಂದಿ ಕೆಲಸ ಮಾಡುತಿದ್ದಾರೆ. ಮಕ್ಕಳ ಪೋಷಣ ಶಕ್ತಿಗೆ ಪೂರಕ ಆಹಾರಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಸಾಲಿನಲ್ಲಿ ಹೆಚ್ಚೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕೆಂದು ವಿನಂತಿ ಮಾಡಿದರು.ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಚಂದ್ರಕಲಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೌಲತ್ ಪಾಷಾ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿಂಗಯ್ಯ, ಮುಖ್ಯ ಶಿಕ್ಷಕ ದಿನೇಶ್, ಸಿಆರ್‌ಪಿ ಕಿರಣ್, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.====

ಫೊಟೋಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ನಮ್ಮ ಶಾಲೆ,ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಬಿಇಒ ನಾರಾಯಣ ಅವರು ಮಾತನಾಡಿದರು.

-----------------------------------------------------------