ಸರ್ಕಾರಿ ಶಾಲೇಲಿ ಮಕ್ಕಳ ದಾಖಲಾತಿ ಕುಸಿಯಲು ಕಳಪೆ ಫಲಿತಾಂಶ ಕಾರಣ: ಶಾಸಕ

| Published : Jun 14 2024, 01:04 AM IST

ಸರ್ಕಾರಿ ಶಾಲೇಲಿ ಮಕ್ಕಳ ದಾಖಲಾತಿ ಕುಸಿಯಲು ಕಳಪೆ ಫಲಿತಾಂಶ ಕಾರಣ: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ನಿವೃತ್ತರಾದರೆ ಸರ್ಕಾರ ಹೊಸ ನೇಮಕಾತಿಗೆ ಅನುಮತಿ ನೀಡುತ್ತಿಲ್ಲ. ಇದರಿಂದ ಶಿಕ್ಷಕರ ಕೊರತೆ ಕಾಡುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳೂ ಮುಚ್ಚಿ ಹೋಗುವ ಅಪಾಯ ಎದುರಾಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯಲು ಕಳಪೆ ಫಲಿತಾಂಶವೇ ಕಾರಣ. ಶಿಕ್ಷಕರು ಯಾವುದೇ ಸಬೂಬು ಹೇಳದೇ ಮಕ್ಕಳನ್ನು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಸಜ್ಜುಗೊಳಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪರಾಮರ್ಶನಾ ಸಭೆಯಲ್ಲಿ ಮಾತನಾಡಿ, ಫಲಿತಾಂಶ ಕುಸಿಯಲು ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದು ಪ್ರಮುಖ ಕಾರಣ ಎಂದ ಕೆಲವು ಮುಖ್ಯ ಶಿಕ್ಷಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸರಾಸರಿ ಶೇ.67 ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳಲ್ಲಿ ಶೇ.83 ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳ ಮಕ್ಕಳು ಕೂಡಾ ಸಿಸಿ ಕ್ಯಾಮರಾ ಅಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಖಾಸಗಿ ಶಾಲೆ ಶಿಕ್ಷಕರಿಗಿರುವ ಕಲಿಸುವ ಇಚ್ಛಾಶಕ್ತಿ ಸರ್ಕಾರಿ ಶಾಲೆ ಶಿಕ್ಷಕರಿಗಿಲ್ಲ. ಇದು ಮಕ್ಕಳ ಕಲಿಕಾ ಪ್ರಗತಿ ಹಿನ್ನಡೆಗೆ ಕಾರಣ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕಳೆದ ಸಾಲಿನಲ್ಲಿ 14 ಸಾವಿರ ಇದ್ದ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಪ್ರಸಕ್ತ ವರ್ಷ 11 ಸಾವಿರಕ್ಕೆ ಕುಸಿದಿದೆ. ಆದರೆ, ಖಾಸಗಿ ಶಾಲೆಗಳ ದಾಖಲಾತಿ ಸಂಖ್ಯೆ ಏರು ಮುಖದಲ್ಲಿದೆ. ಇದರ ಬಗ್ಗೆ ಶಿಕ್ಷಕ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಿಕೊಂಡೇ ನಾವು ಆಂಗ್ಲ ಮಾಧ್ಯಮ ಆರಂಭಿಸಬೇಕಾಗಿದೆ. ಪೋಷಕರ ಆಂಗ್ಲ ಭಾಷಾ ವ್ಯಾಮೋಹವೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯಲು ಪ್ರಮುಖ ಕಾರಣ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲು ಶಾಲಾ ಕೊಠಡಿಯನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ದೈನಂದಿನ ಪಾಠ ಪ್ರವಚನಕ್ಕೆ ಕೊಠಡಿಗಳ ಸಮಸ್ಯೆ ಎದುರಾಗಿದೆ. ಬಹುತೇಕ ಶಾಲೆಗಳ ಕಟ್ಟಡಗಳಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿದೆ. ಕೆಲ ಕಟ್ಟಡದ ಆರ್.ಸಿ.ಸಿ ಕಿತ್ತು ಬರುತ್ತಿವೆ ಎಂದರು.

ಶಾಲೆಗಳ ಶೌಚಾಲಯ ಸ್ವಚ್ಛ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಮಕ್ಕಳ ಸಹಕಾರ ಪಡೆದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಶೌಚಾಲಯ ಸ್ವಚ್ಛತೆಯ ಜವಾಬ್ದಾರಿಯನ್ನು ಆಯಾ ಗ್ರಾಪಂಗೆ ವಹಿಸಬೇಕು ಎಂದು ಮನವಿ ಮಾಡಿದರು.

ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ನಿವೃತ್ತರಾದರೆ ಸರ್ಕಾರ ಹೊಸ ನೇಮಕಾತಿಗೆ ಅನುಮತಿ ನೀಡುತ್ತಿಲ್ಲ. ಇದರಿಂದ ಶಿಕ್ಷಕರ ಕೊರತೆ ಕಾಡುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳೂ ಮುಚ್ಚಿ ಹೋಗುವ ಅಪಾಯ ಎದುರಾಗಲಿದೆ ಎಂದು ಮನವಿ ಮಾಡಿದರು.

ಬಿಇಒ ಆರ್.ಎಸ್.ಸೀತಾರಾಂ ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚಿದರೆ ಅದು ಸಾಮಾಜಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲ ಶಾಲೆಗಳಲ್ಲಿ ಶಿಕ್ಷಕರು ಕರ್ತವ್ಯದ ವೇಳೆ ಮೊಬೈಲ್ ಬಳಕೆ ಮಾಡಿ ಕಾಲಹರಣ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಬಳಕೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಭೆಯಲ್ಲಿ ತಾಪಂ ಇಒ ಬಿ.ಎಸ್.ಸತೀಶ್, ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ಅಧಿಕಾರಿ ಯತೀಶ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಬಸವರಾಜು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ವೆಂಕಟೇಶ್ ಸೇರಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.