ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರುಪಟ್ಟಣದ ಪೊಲೀಸ್ ಠಾಣೆ ಹಿಂಭಾಗವಿರುವ ಶತಮಾನಗಳ ಇತಿಹಾಸ ಹೊಂದಿರುವ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶಾತಿಯನ್ನು ಸೋಮವಾರ ಆರಂಭಿಸಿದ್ದು, ಮೊದಲ ದಿನವೇ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾದರು. ಪಾಲಕರ ಸಹಕಾರದೊಂದಿಗೆ ನಿರ್ವಹಣೆ ಮಾಡುತ್ತಿರುವ ಎಲ್.ಕೆಜಿಗೆ (ಆಂಗ್ಲ ಮಾಧ್ಯಮ) 30 ವಿದ್ಯಾರ್ಥಿಗಳು, ಯುಕೆಜಿಗೆ 25 ಮತ್ತು ಒಂದನೇ ತರಗತಿಗೆ 42 ಮಕ್ಕಳು ಪ್ರವೇಶ ಪಡೆದಿದ್ದಾರೆಂದು ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್ ತಿಳಿಸಿದ್ದಾರೆ.ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಹಂತದಲ್ಲಿದ್ದ 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯನ್ನು ದಾನಿಗಳು, ಹಳೆಯ ವಿದ್ಯಾರ್ಥಿಗಳು ಸರ್ಕಾರೇತರ ಸಂಘ ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಉಳಿಸಿಕೊಳ್ಳಲಾಗಿದೆ ಎಂದರು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ವ್ಯಾಸಂಗ ಮಾಡುತ್ತಿದ್ದು, ಪ್ರಸಕ್ತ ಸಾಲಿಗಾಗಿ ಪ್ರವೇಶಾತಿಯನ್ನು ಈಗಿಂದಲೇ ಆರಂಭಿಸಲಾಗಿದೆ. ಸರ್ಕಾರಿ ಶಾಲೆಯಲ್ಲೂ ಪ್ರವೇಶಾತಿ ಆರಂಭವಾಗುವುದು ಜೂನ್ ತಿಂಗಳಿಂದ, ಆದರೆ ಈ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಉತ್ಸಾಹದಿಂದ ಮುಂದೆ ಬರುತ್ತಿದ್ದು, ಮೊದಲ ದಿನವೇ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ ಸಾಲಿಗಾಗಿ 350ಕ್ಕೂ ಹೆಚ್ಚು ನೂತನ ಪ್ರವೇಶಾತಿ ಆಗಬೇಕೆಂಬ ಗುರಿ ಹೊಂದಲಾಗಿದ್ದು, ಗುರಿ ತಲುಪಿದಲ್ಲಿ ಈಗಾಗಲೇ ಒಂದು ಕೋಟಿ ರು. ವೆಚ್ಚದಡಿ 6 ಸ್ಮಾರ್ಟ್ ಕ್ಲಾಸ್ ಗಳನ್ನು ನಿರ್ಮಿಸಿಕೊಟ್ಟಿರುವ ಒಸಾಟ್ ಸಂಸ್ಥೆ ಹೆಚ್ಚುವರಿಯಾಗಿ ಮತ್ತೆ 6 ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ. ನಮ್ಮ ನಿರೀಕ್ಷೆಯಂತೆ ಪ್ರವೇಶಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.ಎಸ್.ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ಮುಖ್ಯಶಿಕ್ಷಕ ಡಾ. ಮಾದುಪ್ರಸಾದ್ ಮತ್ತವರ ತಂಡದ ಅತ್ಯುತ್ತಮ ಕಾರ್ಯನಿರ್ವಹಣೆಯಿಂದಾಗಿ ಇದು ಸಾಧ್ಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.