ನಿಗದಿತ ನೀರಿನ ಪ್ರಮಾಣ, ಗೇಟ್ ನಿರ್ವಹಣಾ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನಾರಾಯಣಪೂರ ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದ್ದು ಕೂಡಲೇ ರೈತರ ಬೇಡಿಕೆಗೆ ಅನುಸಾರ ನೀರು ಬಿಡಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ನಿಗದಿತ ನೀರಿನ ಪ್ರಮಾಣ, ಗೇಟ್ ನಿರ್ವಹಣಾ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನಾರಾಯಣಪೂರ ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದ್ದು ಕೂಡಲೇ ರೈತರ ಬೇಡಿಕೆಗೆ ಅನುಸಾರ ನೀರು ಬಿಡಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.

ತಾಲೂಕಿನಲ್ಲಿ ಎನ್ಆರ್ಬಿಸಿ ಕಾಲುವೆಗಳ 17ರಿಂದ 18ರ ವಿತರಣಾ ಕಾಲುವೆಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಕುರಿತು ಪರಿಶೀಲಿಸಿ, ರೈತರೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಲುವೆಗಳ ನಿರ್ವಹಣಾ ವೈಫಲ್ಯದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಫಸಲಿಗೆ ಬಂದ ಬೆಳೆ ಒಣಗಿಹೋಗುವ ಭೀತಿ ಆವರಿಸಿದೆ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಗೇಟ್ ನಿರ್ವಹಣಾ ದೋಶದಿಂದ ಕೊನೆ ಭಾಗದ ಜಮೀನುಗಳಿಗೆ ನೀರು ತಲಪುತ್ತಿಲ್ಲ. ಮೆಣಸಿನಕಾಯಿ ಮತು ಭತ್ತ ಬೆಳೆಗಳನ್ನು ಬೆಳೆದ ಬೆಳೆಗಾರರು ರಾತ್ರಿ - ಹಗಲು ಎನ್ನದೇ ನೀರಿಗಾಗಿ ಕಾದು ಕುಳಿತಿದ್ದಾರೆ.

ಕಾಲುವೆಗಳಿಗೆ ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕಾಗಿದೆ. ಬೆಂಗಳೂರಿನಲ್ಲಿ ಅ.12ರಂದು ಜರುಗಲಿರುವ ಕೆಬಿಜೆಎನ್ಎಲ್ ಅಧಿಕಾರಿಗಳ ಸಭೆಯಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಗಮನ ಸೆಳೆಯಲಾಗುವುದು. ಇತ್ತೀಚಿಗೆ ಕೈಗೊಂಡಿರುವ ಕಾಲುವೆಗಳ ನವೀಕರಣ ಕಾಮಗಾರಿ ಹಾಗೂ ದುರಸ್ತಿ ಕಾಮಗಾರಿ ಅಪೂರ್ಣ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಯಾಗಿರುವ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿಯಂತ್ರಣ ಮಾಡುವಲ್ಲಿ ಸರಕಾರ ವಿಫಲಗೊಂಡಿದೆ. ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕಾಗಿದೆ.ಗ್ಯಾರಂಟಿ ಯೋಜನೆಗಳ ನೆಪ ಹೇಳುತ್ತಾ ರಾಜ್ಯ ಸರಕಾರ ಕಾಲಹರಣ ಮಾಡುತ್ತಿದೆ. ವಿಮಾ ಪರಿಹಾರ ಕೂಡ ಬಾಕಿ ಇದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರು, ಅಧಿಕಾರಿಗಳು, ರೈತರು ಇದ್ದರು.