ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಯಾವುದೇ ಅನ್ಯಾಯವಾಗಬಾರದು. ಕಷ್ಟದಲ್ಲಿರುವ ಬಡಜನರು ನೆಮ್ಮದಿ ಜೀವನ ನಡೆಸುವ ಸಲುವಾಗಿ ಇರುವ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯ ಯೋಜನೆಯಾಗಿದೆ.
ಲಕ್ಷ್ಮೇಶ್ವರ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ತಲಾ ಆದಾಯ ಹೆಚ್ಚಿಸುವ ಮೂಲಕ ಆರ್ಥಿಕ ಸದೃಢತೆಗೆ ದಾರಿಯಾಗಿವೆ ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.
ಸೋಮವಾರ ಪಟ್ಟಣದ ತಾಪಂ ಸಬಾಭವನದಲ್ಲಿ ನಡೆದ ಪಂಚ ಗ್ಯಾರಂಟಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ವೇಳೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಯಾವುದೇ ಅನ್ಯಾಯವಾಗಬಾರದು. ಕಷ್ಟದಲ್ಲಿರುವ ಬಡಜನರು ನೆಮ್ಮದಿ ಜೀವನ ನಡೆಸುವ ಸಲುವಾಗಿ ಇರುವ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯ ಯೋಜನೆಯಾಗಿದೆ. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಆಶಯದೊಂದಿಗೆ ಆರಂಭಗೊಂಡಿರುವ ಅನ್ನಭಾಗ್ಯ ಯೋಜನೆ ಇನ್ನಷ್ಟು ಸಮರ್ಪಕವಾಗಿ ಯಶಸ್ವಿಯಾಗಿ ಜಾರಿಯಾಗಬೇಕು ಎಂದ ಅವರು, ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮವ್ವ ಹುರಕನವರ ಎಂಬ ಮಹಿಳೆಗೆ ಇನ್ನೊಂದು ವಾರದೊಳಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡುವ ಮೂಲಕ ಬಡ ಮಹಿಳೆಯ ಕಣ್ಣೀರು ವರೆಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೊಂಡ ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಣೆಗೆ ಹೆಚ್ಚು ಕೊಡುಗೆ ನೀಡಿವೆ. ಗೃಹಲಕ್ಷ್ಮೀ ಯೋಜನೆ ಮಹಿಳೆಯರನ್ನು ಸಬಲರನ್ನಾಗಿ ಮಾಡಿದೆ. ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಶೇ. 96.83ರಷ್ಟು ಮಹಿಳೆಯರಿಗೆ ಹಣ ಜಮೆ ಮಾಡಲಾಗಿದೆ.ಯುವನಿಧಿ ಯೋಜನೆ ಅಡಿಯಲ್ಲಿ 817 ಯುವ ಪದವಿಧರರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 679 ಯುವಕರಿಗೆ ₹8 ಲಕ್ಷಕ್ಕೂ ಹೆಚ್ಚಿನ ಹಣ ಜಮೆ ಮಾಡಲಾಗಿದೆ. ಸ್ತ್ರೀಶಕ್ತಿ ಯೋಜನೆ ಅಡಿಯಲ್ಲಿ ಲಕ್ಷಾಂತರ ಮಹಿಳೆಯರು ಬಸ್ ಸಂಚಾರ ಮಾಡಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಶೇ. 96ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಸಭೆಯಲ್ಲಿ ತಾಪಂ ಇಒ ಮಂಜುಳಾ ಹಕಾರಿ, ಎಡಿ ಕೃಷ್ಣಪ್ಪ ಧರ್ಮರ ಸೇರಿದಂತೆ ಗ್ಯಾರಂಟಿ ಅನುಷ್ಠಾನ ಯೋಜನೆಯ ಸದಸ್ಯರು, ಅಧಿಕಾರಿಗಳು ಇದ್ದರು.