ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಈ ಕಾರ್ಯಕ್ರಮಗಳ ಪರಿಷ್ಕರಣೆ ಕಾರ್ಯವು ಇದೀಗ ನಡೆಯುತ್ತಿದ್ದು ಈ ಕುರಿತು ಜನಜಾಗೃತಿ ಮೂಡಿಸಬೇಕು, ಅರ್ಹರಿಗೆ ಯೋಜನೆ ತಲುಪುವಂತೆ ಮಾಡಲು ಅಧಿಕಾರಿಗಳು ಪ್ರತಿ ಹಂತದಲ್ಲಿ ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ತಿಳಿಸಿದರು.

ಸ್ಥಳೀಯ ಜಿಪಂ ಕಚೇರಿ ಆವರಣದಲ್ಲಿರುವ ಜಲನಿರ್ಮಲ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾದ ಮನೆ ಯಜಮಾನರಿಗೆ ಪ್ರತಿ ತಿಂಗಳು ಕಡ್ಡಾಯ ವಾಗಿ ಹಣ ಜಮೆಯಾಗುವಂತೆ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೂ 29 ಕಂತಿನ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲಾಗಿದೆ. ಈ ಯೋಜನೆಯಡಿ ಗೊಂದಲಕ್ಕೆ ಅವಕಾಶ ನೀಡ ಬಾರದು. ಜಿಲ್ಲೆಯಲ್ಲಿ ಒಟ್ಟು ನೋಂದಣಿಯಾದವರು ಮತ್ತು ಅನರ್ಹ ಫಲಾನುಭವಿಗಳ ಎಷ್ಟು ಖಾತೆಗಳ ಬಂದ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ದಲ್ಲಿ ನಾಡ ಕಾರ್ಯಾಲಯದಿಂದ ನೀಡಿದ ಮರಣ ಪ್ರಮಾಣ ಪತ್ರವನ್ನು ಮೂಲ ದಾಖಲಾತಿಯಾಗಿ ಪರಿಗಣಿಸಬೇಕು. ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮೃತಪಟ್ಟ ಫಲಾನುಭವಿಗಳ ಹೆಸರು ಖಾತರಿಪಡಿಸಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಕುರಿತು ಸಭೆಗೆ ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಜಿಪಂ ಸಿಇಒ ಅವರು ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಸಮಿತಿ ಪದಾಧಿಕಾರಿಗಳು,ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪಂಚ ಗ್ಯಾರಂಟಿಗಳ ಪ್ರಗತಿ ಮಾಹಿತಿ:


ಜಿಲ್ಲೆಯಾದ್ಯಂತ ಅನ್ನಭಾಗ್ಯ ಯೋಜನೆಯಡಿ ಜುಲೈವರೆಗೆ 513058 ಪಡಿತರ ಚೀಟಿಗಳಿದ್ದು, ಅರ್ಹ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನಯಡಿ ಆಹಾರ ಧಾನ್ಯವನ್ನು ಪಡಿತರ ಚೀಟಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ 2026ರ ಏಪ್ರಿಲ್ ರವರೆಗೆ 460527 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಒಟ್ಟು 865,180,000 ರು.ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದ್ದು, ಮೇ. ತಿಂಗಳಿನ ಸಹಾಯಧನವು ಪ್ರಗತಿಯಲ್ಲಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 352582 ಫಲಾನುಭವಿಗಳಿಗೆ 458.76 ಕೋಟಿ ರು. ವೆಚ್ಚ ಭರಿಸಲಾಗಿದೆ. ಶಕ್ತಿ ಯೋಜನೆಯಡಿ 1303.83 ಲಕ್ಷ ಅಭ್ಯರ್ಥಿಗಳು ಉಚಿತವಾಗಿ ಪ್ರಯಾಣಿಸುವುದರ ಮೂಲಕ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, ಒಟ್ಟು 2967.31 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 8904 ಪದವಿ ಹಾಗೂ 183 ಡಿಪ್ಲೋಮಾ ಪೂರ್ಣಗೊಳಿಸಿದ ನೋಂದಾಯಿತ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದು, ಒಟ್ಟು 2,69,86,500 ರು.ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ಸಂಬAಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.