ಹೊರಗುತ್ತಿಗೆ ಪದ್ಧತಿಯಿಂದ ದುಡಿಯುವ ವರ್ಗ ಶೋಷಣೆಗೆ ಒಳಗಾಗುತ್ತಿದ್ದು, ಸರ್ಕಾರ ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗ ಭದ್ರತೆ ಕಲ್ಪಿಸುವ ಕುರಿತು ಗಂಭೀರವಾಗಿ ಚಿಂತಿಸಬೇಕು.

ಹುಬ್ಬಳ್ಳಿ:

ಹೊರಗುತ್ತಿಗೆ ಪದ್ಧತಿಯಿಂದ ದುಡಿಯುವ ವರ್ಗ ಶೋಷಣೆಗೆ ಒಳಗಾಗುತ್ತಿದ್ದು, ಸರ್ಕಾರ ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗ ಭದ್ರತೆ ಕಲ್ಪಿಸುವ ಕುರಿತು ಗಂಭೀರವಾಗಿ ಚಿಂತಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ವಿಶ್ವಶ್ರಮ ಚೇತನ ಆವರಣದಲ್ಲಿ ಡಾ. ಕೆ.ಎಸ್. ಶರ್ಮಾ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭಿತ್ತಿಚಿತ್ರಗಳ ಉದ್ಘಾಟನೆ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಮೂಲಕ ಡಾ. ಕೆ.ಎಸ್. ಶರ್ಮಾ ಅವರು ನೌಕರರಿಗೆ ಭದ್ರತೆ ಕಲ್ಪಿಸುವ ಹೋರಾಟ ನಡೆಸಿದ್ದರು. ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಶರ್ಮಾ ಅವರ ಮಾರ್ಗದರ್ಶನದಿಂದ 23 ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸಲು ಸಾಧ್ಯವಾಯಿತು ಎಂದು ಶೆಟ್ಟರ್ ಸ್ಮರಿಸಿದರು.

ಸರ್ಕಾರಗಳು ತಾತ್ಕಾಲಿಕ ಗ್ಯಾರಂಟಿ ಯೋಜನೆಗಳ ಜತೆಗೆ ಜನರಿಗೆ ದೀರ್ಘಕಾಲಿಕ ಉದ್ಯೋಗ ಭದ್ರತೆ ಒದಗಿಸುವತ್ತ ಗಮನಹರಿಸಬೇಕು. ನೌಕರಿ ಭದ್ರತೆಯಿಲ್ಲದೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಪದ್ಧತಿ ಕುರಿತು ಸರ್ಕಾರ ಮರುಚಿಂತನೆ ನಡೆಸಬೇಕು ಎಂದರು.

ಡಾ. ಕೆ.ಎಸ್. ಶರ್ಮಾ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅವರ ಹೋರಾಟದ ಬದುಕು ಸಮಾಜಕ್ಕೆ ಸ್ಫೂರ್ತಿಯಾಗಿದೆ. ಅವರು ನೂರು ವರ್ಷಗಳ ವರೆಗೆ ಆರೋಗ್ಯದಿಂದ ಬಾಳಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಅವರ 100ನೇ ಜನ್ಮದಿನವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸೋಣ ಎಂದರು.

ದುಡಿಯುವ ವರ್ಗ ಒಗ್ಗಟ್ಟಾಗಲಿ:

ಡಾ. ಕೆ.ಎಸ್. ಶರ್ಮಾ ಮಾತನಾಡಿ, ಜೀವನಪೂರ್ತಿ ದುಡಿಯುವ ವರ್ಗದ ಪರ ಹೋರಾಟ ನಡೆಸಿದ್ದೇನೆ. ಅನ್ಯಾಯ ಹಾಗೂ ಶೋಷಣೆಗೆ ಒಳಗಾದವರು ಒಗ್ಗಟ್ಟಾಗಿ ದುಡಿಯುವ ರಾಜ್ಯ ಕಟ್ಟಬೇಕು. ಆಳುವವರು ದುಡಿಯುವ ವರ್ಗದವರಾಗಬೇಕು, ದುಡಿಯುವವರು ಭಿಕ್ಷುಕರಾಗಬಾರದು. ಇದಕ್ಕಾಗಿ ಒಗ್ಗಟ್ಟು ಬೆಳೆಸಿಕೊಳ್ಳಬೇಕು ಎಂದರು.

ದುಡಿಯುವ ವರ್ಗಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಸರ್ಕಾರ ಇದ್ದೂ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, 93 ವರ್ಷ ವಯಸ್ಸಾದರೂ ಹೋರಾಟದ ಶಕ್ತಿ ಕುಗ್ಗಿಲ್ಲ ಎಂದರು.

ಮೂರು ಕೃತಿಗಳ ಬಿಡುಗಡೆ:

ಡಾ. ಕೆ.ಎಸ್. ಶರ್ಮಾ ಅವರ ಕುರಿತು "ಕುವಲಯನ ಆತ್ಮಾವಲೋಕನ ", "ನಾ ಕಂಡ ಕುವಲಯ " ಹಾಗೂ "ಕುವಲಯರ ಸಂಘರ್ಷಮಯ ಬಾಳು: ಒಂದು ರಸಯಾತ್ರೆ " ಎಂಬ ಮೂರು ಕೃತಿಗಳನ್ನು ಜಗದೀಶ ಶೆಟ್ಟರ್ ಹಾಗೂ ಡಾ. ಕೆ.ಎಸ್. ಶರ್ಮಾ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ವೇಳೆ ನಿವೃತ್ತ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ, ಕೆಎಲ್‌ಇ ಸಮೂಹ ಸಂಸ್ಥೆ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಪ್ರಾಚಾರ್ಯ ಸಂಜಯ ತ್ರಾಸದ, ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ, ಸುಲೋಚನಾ ಪೋತ್ನೀಸ್, ಡಾ. ಶ್ರೀನಿವಾಸ ಬನ್ನಿಗೋಳ, ಪ್ರೊ. ರವೀಂದ್ರ ಶಿರೋಳ್ಕರ, ಡಾ. ಸಿ.ಸಿ. ಹಿರೇಮಠ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.