ಬೆಳೆ ಸಮೀಕ್ಷೆ ಸರಿಯಾದ ಕ್ರಮದಲ್ಲಾಗಲಿ: ಅಧಿಕಾರಿಗಳಿಗೆ ಡಿಸಿ ಮಿಶ್ರಾ ಸೂಚನೆ

| Published : Aug 20 2025, 01:30 AM IST

ಬೆಳೆ ಸಮೀಕ್ಷೆ ಸರಿಯಾದ ಕ್ರಮದಲ್ಲಾಗಲಿ: ಅಧಿಕಾರಿಗಳಿಗೆ ಡಿಸಿ ಮಿಶ್ರಾ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯು ಯಾವುದೇ ಕಾರಣಕ್ಕೂ ವಿಳಂಬವಾಗದೇ ನಿಗದಿತ ಸಮಯದಲ್ಲಿ ಜರುಗಬೇಕು.

ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯು ಯಾವುದೇ ಕಾರಣಕ್ಕೂ ವಿಳಂಬವಾಗದೇ ನಿಗದಿತ ಸಮಯದಲ್ಲಿ ಜರುಗಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.

ಬೆಳೆ ಕಟಾವು ಪ್ರಯೋಗಗಳ ಪ್ರಗತಿ ಪರಿಶೀಲನೆ, ಜನನ-ಮರಣ ನಾಗರಿಕ ನೋಂದಣಿ ಪದ್ಧತಿ, ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಹಾಗೂ ಇತರೆ ವಿಷಯಗಳ ಕುರಿತ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈ ಸಾಲಿನ ಬೆಳೆ ಸಮೀಕ್ಷೆ ಸಹ ಆರಂಭಗೊಂಡಿದೆ. ಸಮೀಕ್ಷೆಯು ಸರಿಯಾದ ಕ್ರಮದಲ್ಲಿ ಆಗಬೇಕಿದೆ. ಸಮೀಕ್ಷೆ ಮಾಡುವವರಿಗೆ ಸೂಕ್ತ ತರಬೇತಿ ನೀಡಬೇಕು. ಪ್ರಸ್ತಕ ಸಾಲಿಗೆ ಜಿಲ್ಲೆಯಲ್ಲಿ ಶೇ.84 ರಷ್ಟು ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನ ಬೆಳೆವಾರು ಸಮೀಕ್ಷೆ ಮಾಡಲು ಐದು ತಾಲೂಕುಗಳಿಗೆ ಕೃಷಿ, ತೋಟಗಾರಿಕೆ, ಕಂದಾಯ ಮತ್ತು ಆರ್‌ಡಿಪಿಆರ್ ಇಲಾಖೆಗಳಿಂದ 1760 ಜನ ಮೂಲ ಕಾರ್ಯಕರ್ತರನ್ನು ಹಂಚಿಕೆ ಮಾಡಲಾಗಿದೆ. ಇಲ್ಲಿಯವರೆಗೆ 1704 ಪ್ರಯೋಗ ನಡೆದಿವೆ. ಪ್ರಗತಿ ಸಾಧಿಸಬೇಕು. ಮುಖ್ಯವಾಗಿ ಬೆಳೆ ಸಮೀಕ್ಷೆಯಲ್ಲಿ ಫಾರಂ-1 ಕಡ್ಡಾಯವಾಗಿ ಭರ್ತಿ ಮಾಡಬೇಕು. ಸಂಬಂಧಿಸಿದ ಆಯಾ ಇಲಾಖೆ ಅಧಿಕಾರಿಗಳು ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ಕೆ. ಪತ್ರಿಬಸಪ್ಪ ಮಾತನಾಡಿ, 2025ರ ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ ಜನನ ನೋಂದಣಿ ಕುರಿತಂತೆ ಗಂಡು-8,817, ಹೆಣ್ಣು-8,281 ಸೇರಿ ಒಟ್ಟು 17,098 ನೋಂದಣಿಯಾಗಿವೆ. ಅದೇ ರೀತಿಯಾಗಿ 2025ರ ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ ಮರಣ ನೋಂದಣಿ ಕುರಿತಂತೆ ಗಂಡು-4,667, ಹೆಣ್ಣು-3,213 ಮತ್ತು ಲಿಂಗತ್ವ ಅಲ್ಪಸಂಖ್ಯಾತರು-3 ಸೇರಿದಂತೆ ಒಟ್ಟು 7,883 ನೋಂದಣಿಯಾಗಿವೆ ಎಂದು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಜರುಗುವ ಜನನ, ಮರಣಗಳನ್ನು ಕಡ್ಡಾಯವಾಗಿ ಜನನ-ಮರಣ ಅಧಿನಿಯಮದಡಿ 21 ದಿನಗಳ ನಿಗದಿತ ಅವಧಿಯೊಳಗೆ ನೋಂದಣಿ ಕಾರ್ಯ ಕೈಗೊಳ್ಳಬೇಕು. ಯಾವುದೇ ತಡ ನೋಂದಣಿಗೆ ಅವಕಾಶ ನೀಡದೇ ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದೇ ಸಕಾಲದಲ್ಲಿ ಸಾರ್ವಜನಿಕರಿಗೆ ಜನನ ಮರಣದ ನೋಂದಣಿ ಪ್ರಮಾಣ ಪತ್ರ ವಿತರಣೆಯಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ-ಸಂಸ್ಥೆಗಳಲ್ಲಿ ಈವರೆಗೆ (2025ರ ಜನವರಿಯಿಂದ ಜುಲೈವರೆಗೆ) ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದಂತೆ ಒಟ್ಟು 3388 ಪ್ರಕರಣ ನೋಂದಣಿ ಬಾಕಿ ಇದ್ದು, ಈ ಕುರಿತು ಜಿಲ್ಲೆಯ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಜನನ ಮತ್ತು ಮರಣ ಘಟನೆಗಳು ನೋಂದಣಿಗೆ ವಿಳಂಬವಾಗುವುದರ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ತೋಟಗಾರಿಕೆ, ಮಹಾನಗರ ಪಾಲಿಕೆ, ಡಿಡಿಎಲ್‌ಆರ್ ಅಧಿಕಾರಿಗಳು ಸೇರಿ ಎಲ್ಲಾ ತಾಲೂಕಿನ ತಹಶೀಲ್ದಾರರು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.