ಗದಗ: ಪ್ರತಿಯೊಬ್ಬ ಪ್ರಾಂಶುಪಾಲರು ಪ್ರತಿ ಮಗುವಿಗೆ ರಕ್ಷಣೆ, ಕಾನೂನಿನ ರಕ್ಷಣೆ, ಕುಟುಂಬ ವಾತಾವರಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶೇಖರಗೌಡ ರಾಮತ್ನಾಳ ತಿಳಿಸಿದರು.
ನಗರದ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ಐಟಿಐ, ನರ್ಸಿಂಗ್, ಪಪೂ ಕಾಲೇಜು ಪ್ರಾಂಶುಪಾಲರಿಗೆ ನಡೆದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿ, ಸಲಹಾ ಪೆಟ್ಟಿಗೆ, 1098 ಶಾಶ್ವತ ಗೋಡೆಬರಹ ಮೂಲ ಸೌಕರ್ಯಗಳ ಕುರಿತು ಗಮನಹರಿಸಬೇಕು. ನಿಯಮ ಬದಲಾವಣೆ ಆದಂತೆ ಅದನ್ನು ತಿಳಿದು ಮಗುವಿನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್. ಮಾತನಾಡಿ, ಪ್ರಾಂಶುಪಾಲರು ತರಬೇತಿಯಲ್ಲಿ ಪಡೆಯುವ ಎಲ್ಲ ಅಂಶಗಳನ್ನು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಸಂಸ್ಕಾರಭರಿತ ಮಾನವಿಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಕಾಲೇಜು ಅವಧಿಯಲ್ಲಿ ಮಕ್ಕಳ ಮೇಲೆ ನಿಗಾ ವಹಿಸಬೇಕು ಹಾಗೂ ಮಕ್ಕಳು ಮೊಬೈಲ್‌ನ್ನು ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದರು. ಪಪೂ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಮಾತನಾಡಿ, ಮಕ್ಕಳ ರಕ್ಷಣಾ ಸಂಬಂಧಿತ ಕಾಯ್ದೆಗಳನ್ನು ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದರು.ಹನುಮಂತ ರೆಡ್ಡಿ ಉಪನ್ಯಾಸ ನೀಡಿದರು. ಮಹಿಳಾ ಪಿಎಸ್ಐ ಎಚ್.ಡಿ. ಓದುಗೌಡರ, ಜಿ.ಎನ್. ಕುರ್ತಕೋಟಿ, ಜಯದೇವಿ ಕವಲೂರು, ಪೂರ್ಣಿಮಾ ಹೊಸಮನಿ, ರಫೀಕಾ ಹಳ್ಳೂರು ಸೇರಿದಂತೆ ಇತರರು ಇದ್ದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು.