ಕುಡಿಯುವ ನೀರು ಸಮಸ್ಯೆ ಆಗದಂತೆ ನಿಗಾ ವಹಿಸಿ: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ

| Published : Feb 22 2024, 01:45 AM IST

ಕುಡಿಯುವ ನೀರು ಸಮಸ್ಯೆ ಆಗದಂತೆ ನಿಗಾ ವಹಿಸಿ: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಬಂಡಿ ಹರ್ಲಾಪುರ ಗ್ರಾಮದಲ್ಲಿ ಸಹ ಹೊಸ ಖಾಸಗಿ ಬೋರ್‌ವೆಲ್ ಗುರುತಿಸಿ ನೀರು ಸರಬರಾಜಿನ ವ್ಯವಸ್ಥೆ ಮಾಡಿಸಲು ಸೂಚನೆ ನೀಡಿದರು.

ಕೊಪ್ಪಳ: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ಕುಡಿಯುವ ನೀರು ಸರಬರಾಜು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

ಇಂದರಗಿ ಗ್ರಾಮದ ಇಂದರಗಿ ತಾಂಡಾಕ್ಕೆ ಭೇಟಿ ನೀಡಿ ಅಲ್ಲಿನ ಮೂರು ಬೋರ್‌ವೆಲ್‌ ಪರಿಶೀಲಿಸಿದರು. ಗ್ರಾಮದಿಂದ 5 ಕಿ.ಮೀ. ದೂರದಲ್ಲಿ ಹೊಸ ಬೋರ್‌ವೆಲ್ ಕೊರೆಯಿಸಿದ್ದು, ಅಲ್ಲಿಂದ ಗ್ರಾಮಕ್ಕೆ ನೀರು ಪೂರೈಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮಸ್ಥರ ಕೋರಿಕೆಯ ಮೇರೆಗೆ 1 ಕಿ.ಮೀ. ದೂರದಲ್ಲಿರುವ ಖಾಸಗಿ ಬೋರ್‌ವೆಲ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಇದೇ ವೇಳೆ ಸಿಇಒ ನಿರ್ದೇಶನ ನೀಡಿದರು.ಕುಡಿಯುವ ನೀರಿಗೆ ತೊಂದರೆಯಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಳಿಕ ಸಿಇಒ ಹೊಸ ಬಂಡಿಹರ್ಲಾಪುರ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮದಲ್ಲಿನ ಕುಡಿವ ನೀರಿನ ಪರೀಕ್ಷೆ ನಡೆಸಲು ಸೂಚನೆ ನೀಡಿದರು. ಗ್ರಾಮದ ಶಾಲಾ ಆವರಣದಲ್ಲಿನ ಬೋರ್‌ವೆಲ್‌ಗೆ ಕ್ರಷಿಂಗ್ ಮಾಡಲು ಸೂಚನೆ ನೀಡಿದರು. ಹೊಸ ಬಂಡಿ ಹರ್ಲಾಪುರ ಗ್ರಾಮದಲ್ಲಿ ಸಹ ಹೊಸ ಖಾಸಗಿ ಬೋರ್‌ವೆಲ್ ಗುರುತಿಸಿ ನೀರು ಸರಬರಾಜಿನ ವ್ಯವಸ್ಥೆ ಮಾಡಿಸಲು ಸೂಚನೆ ನೀಡಿದರು.

ಯಾವುದೇ ಗ್ರಾಮದಲ್ಲಿ ಕುಡಿವ ನೀರಿಗೆ ತೊಂದರೆಯಾಗಬಾರದು. ಕಾಲಕಾಲಕ್ಕೆ ಕುಡಿವ ನೀರನ್ನು ಪರೀಕ್ಷೆಗೊಳಪಡಿಸಬೇಕು. ಸಮಸ್ಯೆ ಕಂಡು ಬರುವ ಕಡೆಗೆ ವಿಳಂಬ ಮಾಡದೇ ಖಾಸಗಿ ಬೋರ್‌ವೆಲ್ ಗುರುತಿಸಿ ಕುಡಿವ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲು ಗಮನ ಹರಿಸಬೇಕು ಎಂದು ಇದೇ ವೇಳೆ ಸಿಇಒ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೇ ವೇಳೆ ಸಿಇಒ, ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಂ ಗ್ರಾಪಂ ವ್ಯಾಪ್ತಿಯಲ್ಲಿನ ಬಹು ಗ್ರಾಮ ಕುಡಿಯುವ ನೀರಿನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಾಮಗಾರಿ ಪರಿಶೀಲನೆ:ಇಂದಿರಾನಗರ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಯಲ್ಲಿರುವ ಅಡುಗೆ ಕೊಠಡಿ, ಶೌಚಾಲಯ ಕಾಮಗಾರಿ ಸಹ ಸಿಇಒ ಪರಿಶೀಲಿಸಿದರು. ಜಬ್ಬಲಗುಡ್ಡ ಗ್ರಾಮಕ್ಕೆ ಸಹ ಭೇಟಿ ನೀಡಿ,ಶಾಲೆಗೆ ಅವಶ್ಯವಿರುವ ಶೌಚಾಲಯಗಳ ನಿರ್ಮಾಣದ ಬಗ್ಗೆ ಪರಿಶೀಲಿಸಿದರು. ಕುಡಿವ ನೀರಿನ ಸರಬರಾಜಿನ ವ್ಯವಸ್ಥೆಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.ಈ ವೇಳೆ ತಾಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಅಭಿಯಂತರ ವಿಲಾಸ್ ಬೋಸ್ಲೆ, ಲಕ್ಷ್ಮೀ ರಡ್ಡಿ, ಪಿಡಿಒ ಮಹೇಶ್ ಸಜ್ಜನ, ನಾಗರಾಜ, ಬೂದಗುಂಪಾ ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಗುತ್ತೂರು, ರೈತ ಮುಖಂಡ ಶ್ರೀನಿವಾಸ ಭೋವಿ, ದೇವಪ್ಪ ಹಲಗೇರಿ ಇದ್ದರು.