ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ತಾಲೂಕಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಸೇರಿದಂತೆ ಹಲವಾರು ತೊಂದರೆಗಳನ್ನು ರೈತರು ಅನುಭವಿಸುವಂತಾಗಿದೆ. ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರುವ ಮೂಲಕ ಬಗೆಹರಿಸಿಕೊಡಬೇಕೆಂದು ಶಾಸಕ ಕೆ.ಷಡಕ್ಷರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ತಾಲೂಕು ಆಡಳಿತದ ಸೌಧದ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಕಡಿಮೆಯಿದ್ದು, ಬಹುತೇಕ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಗ್ರಾಮಸ್ಥರು ನನ್ನಲ್ಲಿ ಸಮಸ್ಯೆ ಹೇಳಿಕೊಂಡಿದ್ದಾರೆ. ಸಂಬಂದಪಟ್ಟ ಪಿಡಿಒಗಳು ಟ್ಯಾಂಕರ್ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಗರಕ್ಕೆ ನೀರು ಸರಬರಾಜು ಮಾಡುವ ಈಚನೂರು ಕೆರೆಗೆ ಹೇಮಾ ನೀರು ಕೆಲವೇ ದಿನಗಳಲ್ಲಿ ಹರಿಯಲಿದ್ದು, ಸಾಧ್ಯವಾದಷ್ಟು ನೀರಿನ ಮಟ್ಟವನ್ನು ಹೆಚ್ಚಿಸಲಾಗುವುದು. ಇದರಿಂದ ಸುತ್ತಮುತ್ತಲ ಗ್ರಾಮಗಳಿಗೂ ನೀರಿನ ಹಾಹಾಕಾರ ತಪ್ಪಲಿದೆ ಎಂದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ, ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಗ್ರಾ.ಪಂ ಪಿಡಿಒಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಾನುವಾರಗಳ ಮೇವಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಪಶು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಸರ್ಕಾರ ನೀರಾವರಿ ಪ್ರದೇಶದ ರೈತರಿಗೆ ಉಚಿತ ಮೇವಿನ ಬೀಜವನ್ನು ಕೊಟ್ಟು ಅವರಿಂದ ಒಂದು ಟನ್‌ಗೆ ಮೂರು ಸಾವಿರ ರು. ನಂತೆ ಮೇವನ್ನು ಖರೀದಿಸಲಾಗುವುದು ಎಂದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದೀಶ್ ಮಾತನಾಡಿ, ನೀರು ಮತ್ತು ವಿದ್ಯುತ್ ಅಭಾವದಿಂದ ರೈತರು ಸರಿಯಾಗಿ ಮೇವನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಮೇವಿನ ಕೊರತೆ ಇರುವ ಕಾರಣ ಹೆಚ್ಚು ನೀರಾವರಿ ಪ್ರದೇಶದ ರೈತರನ್ನು ಗುರ್ತಿಸಿ ಅವರ ಮನವೊಲಿಸಿ ನಮ್ಮ ಇಲಾಖೆಯಿಂದ ಉಚಿತವಾಗಿ ಮೇವಿನ ಬೀಜ ಕೊಟ್ಟು ಮೇವನ್ನು ಬೆಳೆಸಿ, ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ೩೦೦ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಂದು ಟನ್ ಹಸಿ ಮೇವಿಗೆ ಮೂರು ಸಾವಿರ, ಒಣ ಮೇವಿಗೆ ಏಳು ಸಾವಿರ ರು.ಗಳಂತೆ ಸರ್ಕಾರ ಖರೀದಿ ಮಾಡಲಿದೆ. ಆದರೆ ಹೊರಗಡೆ ಮೇವಿಗೆ ಬಾರಿ ಬೇಡಿಕೆ ಇರುವ ಕಾರಣ ಸರ್ಕಾರದ ದರವನ್ನು ರೈತರು ಒಪ್ಪಿಕೊಳ್ಳುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಶಾಸಕರು ರೈತರನ್ನು ಒತ್ತಾಯ ಮಾಡಬೇಡಿ ನೀರಿನ ಸಮಸ್ಯೆ ಇರುವ ಕಾರಣ ಕಷ್ಟವಾಗಲಿದೆ. ಸ್ವಇಚ್ಛೆಯಿಂದ ಬರುವ ರೈತರನ್ನು ಅಗ್ರಿಮೆಂಟ್ ಮಾಡಿಸಿಕೊಂಡು ಮೇವು ಕಟಾವು ಆದ ತಕ್ಷಣ ಅವರಿಗೆ ಹಣ ನೀಡಬೇಕು ಎಂದರು.ಸಭೆಯಲ್ಲಿ ತಾಲೂಕಿನ ಬಜಗೂರು, ಹಾಲ್ಕುರಿಕೆ, ಬಳುವನೇರಲು, ಈಚನೂರು, ಹುಣಸೇಘಟ್ಟ, ಕರಡಿ, ಅರಳಗುಪ್ಪೆ, ಕುಪ್ಪಾಳು, ಮಣಕೀಕೆರೆ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆಯಿದ್ದು, ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್ ಅವಶ್ಯಕತೆ ಇದೆ. ಇರುವ ಬೋರ್‌ವೆ ಲ್‌ಗಳಲ್ಲಿ ನೀರು ಬತ್ತಿ ಹೋಗಿದ್ದು, ನೀರಿಗೆ ತೀವ್ರ ಹಾಹಾಕಾರ ಪಡುವಂತಾಗಿದೆ. ಗ್ರಾಮದ ಜನರು ಪ್ರತಿನಿತ್ಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆಂದು ಗ್ರಾ.ಪಂ ಪಿಡಿಒಗಳು ಶಾಸಕರಿಗೆ ತಿಳಿಸಿದರು. ಸಾಧ್ಯವಾದಷ್ಟು ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿ, ಬತ್ತಿರುವ ಬೋರ್‌ವೆಲ್‌ಗಳನ್ನು ರೀ-ಬೋರ್ ಅಥವಾ ಹೊಸ ಬೋರ್‌ವೆಲ್‌ಗಳನ್ನು ಕೊರೆಸುವ ವ್ಯವಸ್ಥೆ ಮಾಡೋಣ ಎಂದು ಶಾಸಕರು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಬೆಸ್ಕಾಂ ಎಇಇ ಮನೋಹರ್, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ, ಜೆಜೆಎಂನ ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಪಿಡಿಒಗಳು ಭಾಗವಹಿಸಿದ್ದರು.