ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರುಬೇಸಿಗೆ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಬಾರದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಮಸ್ಯೆಯಿದ್ದರೆ ನನಗೆ ತಿಳಿಸಿ ಅಗತ್ಯ ಮಾಹಿತಿ ಪಡೆಯಬೇಕಲ್ಲದೆ ಯಾವುದೇ ಕಾರಣಕ್ಕೂ ಸಬೂಬು ಹೇಳದೆ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಉಪವಿಭಾಗ ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬರಕ್ಕೆ ಸಂಬಂಧಪಟ್ಟ ಕೆಲಸಗಳಿಗೆ ಸಂಬಂದಿಸಿದಂತೆ ವಿಳಂಬ ಮಾಡದೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪ್ರಸ್ತುತ ದಿನಗಳಲ್ಲಿ ನೀರು ಮತ್ತು ಮೇವಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದ್ದು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಬೆಸ್ಕಾಂ, ಪಶು ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಬರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು.
ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೂಡಲೆ ಟ್ಯಾಂಕರ್ ಮೂಲಕವಾಗಲೀ ಅಥವಾ ಹೊಸದಾಗಿ ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ ಈಗಾಗಲೇ ಸಿಡ್ಲೇಹಳ್ಳಿ, ನೊಣವಿನಕೆರೆ ಹಾಗೂ ಬಿಳಿಗೆರೆಯ ತಿಮ್ಲಾಪುರದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲಾಗಿದ್ದು, ಇದರಲ್ಲಿ ಸಿಡ್ಲೇಹಳ್ಳಿಯಲ್ಲಿ ನೀರು ಬಂದಿಲ್ಲದ ಕಾರಣ ಮತ್ತೆ ಬೇರೆ ಕಡೆ ಹೊಸ ಬೋರ್‌ವೆಲ್ ಕೊರೆಸಲು ಅನುಮತಿ ನೀಡಲಾಗಿದೆ. ಯಾವ ಗ್ರಾಮದಲ್ಲಿ ಹೆಚ್ಚಿನ ನೀರಿನ ಅಭಾವ ವಿದೆಯೋ ಅಲ್ಲಿ ಮತ್ತೊಂದು ಹೊಸ ಬೋರ್‌ವೆಲ್ ಕೊರೆಸಲು ಅನುಮತಿ ಕೊಡಲಾಗಿದೆ. ಗ್ರಾಮ ಪಂಚಾಯಿತಿಯ ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಇನ್ನೂ ಕೆಲ ಭಾಗಗಳಲ್ಲಿ ರೀ-ಬೋರ್‌ವೆಲ್‌ಗೆ ಅವಕಾಶ ನೀಡಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಕಾಲರ ರೋಗ ಹರಡುತ್ತಿದ್ದು ಗ್ರಾಮ ಪಂಚಾಯಿತಿ ಹಾಗೂ ನಗರಸಭೆಯ ಅಧಿಕಾರಿಗಳು ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಆಗಾಗಾ ನೀರನ್ನು ಪರಿಶೀಲಿಸಿ ಜನರ ಬಳಕೆಗೆ ನೀಡಬೇಕೆಂದರು.ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಟ್ಯಾಂಕರ್ ಸೇರಿದಂತೆ ಬೋರ್‌ವೆಲ್‌ಗಳ ಮೂಲಕ ನೀರು ವಿತರಿಸಲಾಗುತ್ತಿದೆ ಎಂದರು. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದೀಶ್ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಜಾಗಗಳಲ್ಲಿ ಮೇವನ್ನು ಶೇಖರಣೆ ಮಾಡಲು ಸ್ಥಳ ನಿಗದಿ ಪಡಿಸಲಾಗಿದ್ದು ಬಾಗುವಾಳ, ಶಿವರ, ಅರಳಗುಪ್ಪೆ, ರಜತಾದ್ರಿಪುರ ಇಲ್ಲಿ ಮೇವು ಸಂಗ್ರಹಿಸಲಾಗುವುದು. ಈಗಾಗಲೇ ೫ ಸಾವಿರ ಮಿನಿ ಮೇವಿನ ಬೀಜಗಳ ಕಿಟ್ ಬಂದಿದ್ದು ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು. ಮೇವಿನ ಸಮಸ್ಯೆ ಬಾರದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದರು. ನಂತರ ಚಿಕ್ಕನಾಯಕಹಳ್ಳಿ, ತುರುವೇಕೆರೆ ಸಂಬಂದಪಟ್ಟ ನೀರು ಮತ್ತು ಮೇವಿನ ಸಮಸ್ಯೆಗಳ ಬಗ್ಗೆ ಆಯಾ ಅಧಿಕಾರಿ ವರ್ಗದವರು ಮಾಹಿತಿ ನೀಡಿದರು. ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಮನೋಹರ್, ಗ್ರಾಮೀಣ ಕುಡಿಯುವ ನೀರಿನ ಕಾರ್ಯನಿರ್ವಾಹಕ ಚಂದ್ರಶೇಖರ್, ಚಿ.ನಾಹಳ್ಳಿ ತೋಟಗಾರಿಕೆ ಇಲಾಖೆಯ ಶಶಿಧರ್, ಶಿವಪ್ರಸಾದ್ ಸೇರಿದಂತೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.------------------------------------ಕೊಳವೆ ಬಾವಿ ಕೊರೆಸಲು ಸರ್ಕಾರ ನಿಗಧಿ ಮಾಡಿರುವ ದರದಂತೆ ಖಾಸಗಿ ಬೋರ್‌ವೆಲ್ ಏಜೆನ್ಸಿಯವರು ದರದ ನಿಯಮ ಪಾಲಿಸಬೇಕು ಹಾಗೂ ಕಡ್ಡಾಯವಾಗಿ ಪರವಾನಿಗೆ ಹೊಂದಿರಬೇಕು. ನಮಗೆ ಈಗಾಗಲೇ ರೈತರಿಂದ ದೂರುಗಳು ಕೇಳಿ ಬಂದಿದ್ದು, ಏಜೆನ್ಸಿಯವರು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.
- ಸಪ್ತಶ್ರೀ, ಉಪವಿಭಾಗಾಧಿಕಾರಿಗಳು, ತಿಪಟೂರು.