ಪ್ರತಿ ಕಾಲೇಜು ತಮ್ಮ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳ ವಯೋಮಾನದ ವಿವರಗಳನ್ನು ಪರಿಶೀಲಿಸಿ. ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಂಡಿರುವವರು, ನೋಂದಣಿ ಮಾಡಿಕೊಳ್ಳಬೇಕಿರುವವರು ಹಾಗೂ ಫಾರಂ-೬ ಸಲ್ಲಿಸಬೇಕಿರುವವರ ವಿವರಗಳನ್ನು ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಯಾವುದೇ ಕಾಲೇಜಿನಲ್ಲಿ ಅರ್ಹ ವಿದ್ಯಾರ್ಥಿಯೊಬ್ಬರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಗಮನಹರಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಸೂಚಿಸಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಭಾರತ ಚುನಾವಣಾ ಆಯೋಗದ ಎಸ್‌ವಿಇಇಪಿ ಕಾರ್ಯಕ್ರಮದಡಿ ಯುವ ಮತದಾರರ ನೋಂದಣಿ ಹಾಗೂ ಚುನಾವಣಾ ಸಾಕ್ಷರತೆ ಕುರಿತು ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.

ಪ್ರತಿ ಕಾಲೇಜು ತಮ್ಮ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳ ವಯೋಮಾನದ ವಿವರಗಳನ್ನು ಪರಿಶೀಲಿಸಿ. ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಂಡಿರುವವರು, ನೋಂದಣಿ ಮಾಡಿಕೊಳ್ಳಬೇಕಿರುವವರು ಹಾಗೂ ಫಾರಂ-೬ ಸಲ್ಲಿಸಬೇಕಿರುವವರ ವಿವರಗಳನ್ನು ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿ ಕಾಲೇಜಿನಲ್ಲಿ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗಾಗಿ ಒಬ್ಬ ಉಪನ್ಯಾಸಕರನ್ನು ಲೀಡ್ ಪರ್ಸನ್ ಆಗಿ ಗುರುತಿಸಿ, ಇಎಲ್‌ಸಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ತಿಳಿಸಿದರು.

ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಕಾಲೇಜುಗಳಲ್ಲಿ ಬಿಎಲ್‌ಒಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೋಂದಣಿ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳು ಬಿಎಲ್‌ಒಗಳೊಂದಿಗೆ ಸಮನ್ವಯ ಸಾಧಿಸುವುದು ಅಥವಾ ಆನ್‌ಲೈನ್ ಮೂಲಕ ಫಾರಂ-೬ ಸಲ್ಲಿಸುವುದು ಸೇರಿದಂತೆ ಕಾಲೇಜಿಗೆ ಅನುಕೂಲವಾಗುವ ವಿಧಾನವನ್ನು ಅನುಸರಿಸಬಹುದು ಎಂದರು.

ಯುವ ಮತದಾರರ ವಿಶೇಷ ನೋಂದಣಿ ಅಭಿಯಾನದಡಿ ಸೆ.೧೯ ಮತ್ತು ೨೦ರಂದು ರಾಜ್ಯಾದ್ಯಂತ ನಡೆದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕೈಗೊಂಡ ಜತೆಗೆ, ಸೆ.೩೦ರೊಳಗೆ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದರು. ಸಭೆಯಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.