ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಮೋಸವಾಗದಂತೆ ನೋಡಿಕೊಳ್ಳಿ: ಎಚ್.ಟಿ.ಮಂಜು

| Published : Nov 14 2025, 01:45 AM IST

ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಮೋಸವಾಗದಂತೆ ನೋಡಿಕೊಳ್ಳಿ: ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಲೈಸೆನ್ಸ್ ಪಡೆದುಕೊಂಡ ವರ್ತಕರಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಅನಧಿಕೃತ ವ್ಯಾಪಾರಿಗಳು ಬಂದರೆ ವ್ಯಾಪಾರದಲ್ಲಿ ಮೋಸ ಮಾಡುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು.

ಮಾರುಕಟ್ಟೆಯ ಪ್ರವೇಶ ದ್ವಾರದಿಂದ ಮಾರುಕಟ್ಟೆಯ ಒಳ ಆವರಣದಲ್ಲಿ ಸುಮಾರು 58 ಲಕ್ಷ ರು. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಹಾಗೂ ಸುಮಾರು 13 ಲಕ್ಷ ರು. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಲೈಸೆನ್ಸ್ ಪಡೆದುಕೊಂಡ ವರ್ತಕರಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಅನಧಿಕೃತ ವ್ಯಾಪಾರಿಗಳು ಬಂದರೆ ವ್ಯಾಪಾರದಲ್ಲಿ ಮೋಸ ಮಾಡುವ ಸಾಧ್ಯತೆ ಇದೆ ಎಂದರು.

ಅಧಿಕಾರಿಗಳು ಪ್ರತಿನಿತ್ಯ ಪರಿಶೀಲನೆ ನಡೆಸಿ ರೈತರಿಗೆ ಅನಧಿಕೃತ ವ್ಯಾಪಾರಿಗಳಿಂದ ಹಾಗೂ ಅಧಿಕೃತ ವ್ಯಾಪಾರಿಗಳಿಂದಲೂ ಬೆಲೆ ಹಾಗೂ ತೂಕದಲ್ಲಿ ಯಾವುದೇ ಮೋಸವಾಗದಂತೆ ನೋಡಿಕೊಳ್ಳಬೇಕು ಎಂದರು.

ಕೆ.ಆರ್.ಪೇಟೆ ಎಳೆನೀರು ಮಾರುಕಟ್ಟೆ ರಾಜ್ಯದಲ್ಲೇ ಉತ್ತಮ ಗುಣಮಟ್ಟಕ್ಕೆ ಭಾಜನವಾಗಿದೆ. ಇಲ್ಲಿನ ಎಳೆನೀರಿಗೆ ಮುಂಬೈ, ದೆಹಲಿ, ಗುಜರಾತ್, ಮಧ್ಯಪ್ರದೇಶ, ಬಿಹಾರ್ ಸೇರಿದಂತೆ ದೇಶಾದ್ಯಂತ ಉತ್ತಮ ಬೇಡಿಕೆ ಇದೆ. ವರ್ತಕರು ರೈತರಿಗೆ ಉತ್ತಮ ಬೆಲೆ ನೀಡಿ ಎಳೆನೀರು ಕೊಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂಮೋಸ ಮಾಡಬಾರದು. ರೈತರು ತಮ್ಮ ಎಳನೀರನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕು ಎಂದರು.

ಜಮೀನಿನ ಬಳಿ ಬರುವ ವ್ಯಾಪಾರಿಗಳು ತಮಗೆ ಬೆಲೆಯಲ್ಲಿ ಮೋಸ ಮಾಡುವ ಸಾಧ್ಯತೆ ಇದೆ. ಹಾಗಾಗಿ ಮಾರುಕಟ್ಟೆಗೆ ತಂದು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸಬೇಕು ಎಂದರು.

ಈ ವೇಳೆ ಕೃಷಿ ಮಾರುಕಟ್ಟೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಹಾಗೂ ಆಡಳಿತಾಧಿಕಾರಿ ರೇವತಿ ಬಾಯಿ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗೌರಿಶಂಕರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಸೀಬ್, ತಾಲೂಕು ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್, ಪುರಸಭೆ ಮಾಜಿ ಸದಸ್ಯರಾದ ಕೆ.ಆರ್.ಹೇಮಂತಕುಮಾರ್, ದಿನೇಶ್, ವಿಶ್ವನಾಥ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.